ಶಿವಮೊಗ್ಗ: ಒಂದೆಡೆ ಮಳೆ ವಿಳಂಬ, ಇನ್ನೊಂದೆಡೆ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿರುವ ಮಧ್ಯೆ ಮಾಂಸಾಹಾರಿಗಳಿಗೆ ಈ ಇಲ್ಲೊಂದು ಮಾರುಕಟ್ಟೆಯಲ್ಲಿ ಬಂಪರ್ ಆಫರ್ ನೀಡಲಾಗಿದೆ. ಬಾರಿ ಅಗ್ಗದ ಬೆಲೆಯಲ್ಲಿ ಚಿಕನ್, ಮಟನ್ ಮಾರಾಟವಾಗುತ್ತಿದ್ದು, ಗ್ರಾಹಕರು ಮುಗಿಬಿದ್ದು ಖರಿದಿಗೆ ಮುಂದಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಕೊಪ್ಪದಲ್ಲಿ ಕೆಜಿ ಕುರಿ ಮಾಂಸಕ್ಕೆ 600 ರೂಪಾಯಿಯಿಂದ 700 ರೂಪಾಯಿ ದರವಿದೆ ಆದರೆ ಕಳೆದ ನಾಲ್ಕು ದಿನಗಳಿಂದ ತೀರಾ ಅಗ್ಗದ ದರದಲ್ಲಿ ಕುರಿ, ಕೋಳಿ ಮಾಂಸ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ.
ಶಿರಾಳಕೊಪ್ಪ ಮಾರುಕಟ್ಟೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುರಿ ಮಾಂಸ ಕೆಜಿಗೆ ಕೇವಲ 300-400 ರೂಪಾಯಿಗೆ ಮಾರಾಟವಾಗುತ್ತಿದೆ. ಅಗ್ಗದ ದರದಲ್ಲಿ ಮಾಂಸ ಮಾರಾಟ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಗ್ರಾಹಕರು ಮುಗಿ ಬಿದ್ದು ಖರೀದಿಗೆ ಸಾಲು ಗಟ್ಟಿ ನಿಂತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಡಿಮೆ ದರದಲ್ಲಿ ಮಾಂಸ ಮಾರಾಟ ಎಂದು ನೋಡುತ್ತಿದ್ದಂತೆಯೇ ಶಿವಮೊಗ್ಗ, ಸಾಗರ, ಸೊರಬ, ಬನವಾಸಿ, ಆನೆವಟ್ಟಿ, ಚಿಕ್ಕೇರೂರು, ಹಿರೇಕೇರೂರು ಮುಂತಾದ ಕಡೆಗಳಿಂದ ಮಾಂಸ ಖರೀದಿಸಲು ಜನರು ಗುಂಪು ಗುಂಪಾಗಿ ಬರುತ್ತಿದ್ದಾರೆ. ಒಂದು ಕೇಜಿ ಖರೀದಿಸುತ್ತಿದ್ದವರು ಎರಡು ಕೆಜಿ ಮಾಂಸ ಖರೀದಿಸುತ್ತಿದ್ದಾರೆ. ಇನ್ನು ಕೋಳಿ ಅಂಗಡಿಗಳಲ್ಲಿಯೂ ಕೇವಲ 100 ರೂಪಾಯಿಗೆ ಚಿಕನ್ ಸಿಗುತ್ತಿದೆ.
ಇಷ್ಟಕ್ಕೆಲ್ಲ ಕಾರಣ ಹಳೇ 7 ಮಳಿಗೆಗಳ ಜೊತೆ ಹೊಸದಾಗಿ 5 ಮಳಿಗೆಗಳು ಆರಂಭವಾಗಿದ್ದು… ಹೊಸ ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯುವ ಉದ್ದೇಶಕ್ಕೆ ಈ ರೀತಿ ಕಡಿಮೆ ದರದಲ್ಲಿ ಆಫರ್ ನೀಡಿದ್ದಾರೆ. ಒಟ್ಟಾರೆ ವ್ಯಾಪಾರಿಗಳ ಪೈಪೋಟಿ ನಡುವೆ ಗ್ರಾಹಕರಿಗೆ ಬಂಪರ್ ಕೊಡುಗೆಗಳು ಸಿಗುತ್ತಿವೆ.