
ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆ ವಿಶೇಷ ಹಬ್ಬವಾಗಿದೆ. ರೈತರು ಹೊಲ, ಗದ್ದೆ, ತೋಟಗಳಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಅನ್ನ ನೀಡುವ ಭೂ ತಾಯಿಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಫಸಲು ಹಾಲು ತುಂಬಿಕೊಂಡಿರುತ್ತದೆ. ಗರ್ಭಿಣಿಯಾದ ಭೂಮಿ ತಾಯಿ ಬಯಕೆಯನ್ನು ತೀರಿಸಬೇಕೆಂಬುದು ಮಲೆನಾಡುವ ಭಾಗದ ಜನರ ನಂಬಿಕೆಯಾಗಿದೆ.
ಅದರಂತೆ ಭೂಮಿ ಹುಣ್ಣಿಮೆಯ ದಿನ ಹೊಲ, ಗದ್ದೆ, ತೋಟಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭತ್ತ, ಅಡಿಕೆ ಮೊದಲಾದ ಬೆಳೆಗಳಿಗೆ ಸೀರೆ, ಕುಪ್ಪಸ ತೊಡಿಸಿ ಚಪ್ಪರ ಹಾಕಿ ವಿಶೇಷ ಅಲಂಕಾರ ಮಾಡುವ ಜೊತೆಗೆ ಮನೆ ಮಂದಿಯೆಲ್ಲ ಸೇರಿ ಪೂಜೆ ನೆರವೇರಿಸುತ್ತಾರೆ. ಭೂ ಮಣಿ ಬುಟ್ಟಿಗೆ ಕೆಮ್ಮಣ್ಣು ಸುಣ್ಣದಿಂದ ಚಿತ್ತಾರ ಬಿಡಿ ಅಲಂಕರಿಸಿ ಅದರಲ್ಲಿ ಮನೆಯಿಂದ ಸಿದ್ದಪಡಿಸಿಕೊಂಡು ಬಂದಿದ್ದ ಅಡುಗೆ, ತಿನಿಸುಗಳನ್ನು ಇಟ್ಟು ನೈವೇದ್ಯ ಮಾಡಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಭೂತಾಯಿಗೆ ಬಾಗಿನ ನೀಡಿ ಹರಸುವಂತೆ ಪ್ರಾರ್ಥನೆ ಮಾಡುತ್ತಾರೆ.
ಪ್ರತಿ ವರ್ಷ ದಸರಾ ನಂತರ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಬಯಲು ಸೀಮೆಗಳಲ್ಲಿಯೂ ಸಹ ಭೂಮಿ ಹುಣ್ಣಿಮೆ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಎಡೆಯನ್ನು ಭೂಮಿಯೊಳಗೆ ಇಟ್ಟು ಮುಚ್ಚುವ ಮೂಲಕ ನೈವೇದ್ಯ ಮಾಡುತ್ತಾರೆ. ಭೂ ತಾಯಿ ಇದನ್ನು ಸೇವಿಸುತ್ತಾರೆಂಬ ನಂಬಿಕೆ ರೈತರದ್ದು. ಚರಗವನ್ನು ಚೆಲ್ಲಿ ಇಡೀ ಹೊಲವನ್ನು ರೈತ ಹೆಮ್ಮೆಯಿಂದ ನೋಡುತ್ತಾನೆ. ರೈತರ ಬಹುಮುಖ್ಯವಾದ ಈ ಭೂಮಿ ಹುಣ್ಣಿಮೆ ಹಬ್ಬ ನಾಡಿನ ಅನೇಕ ಭಾಗಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಭೂಮಿ ಹುಣ್ಣಿಮೆ ಒಂದು ಅಪರೂಪದ ಹಬ್ಬ. ಇದನ್ನು ಸೀಗೆ ಹುಣ್ಣಿಮೆ ಎಂದೂ ಕರೆಯುತ್ತಾರೆ. ಭೂ ತಾಯಿಗೆ ಮಕ್ಕಳು ಈ ದಿನ ವಿಶೇಷ ಪೂಜೆ ಮಾಡುತ್ತಾರೆ. ವರ್ಷಪೂರ್ತಿ ಬೆಳೆ ನೀಡುವ ಭೂ ತಾಯಿಗೆ ರೈತರು ಈ ದಿನ ಪೂಜೆ ಮಾಡಿ ತಾಯಿಗೆ ನಮಿಸುತ್ತಾರೆ.
ಭತ್ತ ಮೊಳಕೆಯೊಡೆಯುವ ಈ ಸಂದರ್ಭದಲ್ಲಿ ಭೂತಾಯಿಗೆ ಮಾಡುವ ಪೂಜೆಯನ್ನು ಸೀಮಂತ ಎಂದೂ ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಇದನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಹಬ್ಬವನ್ನು ಬೇರೆ ಬೇರೆ ರೀತಿ ಆಚರಿಸಲಾಗುತ್ತದೆ.