ಓಡುತ್ತಿದ್ದ ಬೈಕ್ ಗೆ ಗೂಳಿ ಗುದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯಂತೆ, ತಮಿಳುನಾಡಿನ ಕನ್ನಮಂಗಲಂನಲ್ಲಿ ಈ ಘಟನೆ ನಡೆದಿದೆ.
ಭಾನುವಾರ ಕನ್ನಮಂಗಲಂ ಪ್ರದೇಶದಲ್ಲಿ ಮಂಜುರಾವಿಟ್ಟು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಳಗಿಸುವಾಗ ಕುಪಿತಗೊಂಡ ಗೂಳಿ ಗುಂಪಿನಲ್ಲಿ ಎಲ್ಲೆಂದರಲ್ಲೆ ಓಡಿದೆ. ಈ ವೇಳೆ ಅದೇ ರಸ್ತೆಯಲ್ಲಿ ಪಾಸ್ ಆಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಗೂಳಿ ವಾಹನದ ಹಿಂದೆ ಕುಳಿತಿದ್ದ ಮಹಿಳೆಯನ್ನ ಸುಮಾರು ಹತ್ತು ಅಡಿ ದೂರ ಎಳೆದುಕೊಂಡು ಹೋಗಿದೆ.
ಆ ತಕ್ಷಣ ಅಲ್ಲಿದ್ದ ಜನಸಮೂಹ ಗೂಳಿಯನ್ನ ಹಿಡಿದು, ಬೈಕ್ ನಿಂದ ಬಿದ್ದ ಚಾಲಕ, ಮಗು ಹಾಗೂ ಮಹಿಳೆಯನ್ನ ರಕ್ಷಿಸಿದೆ. ಈ ಘಟನೆಯು ಅಲ್ಲಿ ನರೆದಿದ್ದವರ ಫೋನ್ ಗಳಲ್ಲಿ ಸೆರೆಯಾಗಿದ್ದು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು 50 ಗೂಳಿ ಪಳಗಿಸುವವರು ಗಾಯಗೊಂಡಿದ್ದಾರೆ. ಪೊಂಗಲ್‌ಗೆ ಕೆಲವೇ ದಿನಗಳು ಬಾಕಿಯಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟುಗೆ ಸಿದ್ಧತೆ ಆರಂಭವಾಗಿದೆ.
ತಿರುವಣ್ಣಾಮಲೈ ಜಿಲ್ಲೆಯಲ್ಲಿ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟು ಕಾರ್ಯಕ್ರಮಗಳನ್ನು ನಡೆಸಲು ಅಧಿಕಾರಿಗಳು ಅನುಮತಿ ನೀಡಿಲ್ಲ. ಆದರೂ, ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆರಣಿಯಿಂದ ಸಂಘಟಕರು ಸುಮಾರು 500 ಹೋರಿಗಳನ್ನು ಕರೆತಂದು 1000ಕ್ಕೂ ಹೆಚ್ಚು ಗೂಳಿ ಪಳಗಿಸುವವರಿಗೆ ಅವಕಾಶ ಕಲ್ಪಿಸಿದರು.
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಮೀಪದ ವೆಲ್ಲೂರು, ಕಾಂಚೀಪುರಂ, ರಾಣಿಪೇಟ್ ಮತ್ತು ಕೃಷ್ಣಗಿರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಿದ್ದರಿಂದ ಕನ್ನಮಂಗಲಂ ಪೊಲೀಸರು ಅನುಮತಿಯಿಲ್ಲದೆ ಮಂಜುವಿರಾಟ್ಟು ನಡೆಸಿದ್ದಕ್ಕಾಗಿ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.