ಮುಂಬೈ: ಮುಂಜಾನೆ 4 ಗಂಟೆಗೆ ಉಪಾಹಾರದ ಆರ್ಡರ್ ಗಳು ಬರುತ್ತಿದ್ದುದನ್ನು ಶಂಕಿಸಿದ ಪೊಲೀಸರು ಕಾಲ್ ಸೆಂಟರ್ ದಂಧೆಯನ್ನು ಭೇದಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಬೀಚ್ ಮುಂಭಾಗದ ಪಕ್ಕದಲ್ಲಿರುವ ಮಯೂರ್ ಕುಟೀರ್ ಫಾರ್ಮ್ಹೌಸ್ನಿಂದ 10 ಅಡಿ ದೂರದಲ್ಲಿರುವ ವಸತಿ ನಿಲಯದಿಂದ ಮುಂಜಾನೆ 4 ಗಂಟೆಗೆ 50 ಜನರಿಗೆ ಚಹಾ ಮತ್ತು ಉಪಹಾರಕ್ಕಾಗಿ ಆರ್ಡರ್ಗಳು ಬರುತ್ತಿದ್ದವು. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ದಾಳಿ ನಡೆಸಿದ್ದಾರೆ. ಈ ವೇಳೆ ವಸತಿ ನಿಲಯದಲ್ಲಿ ನಕಲಿ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ಮುಂಜಾನೆ 3 ಗಂಟೆಗೆ ಪೊಲೀಸರ 20 ತಂಡಗಳು ವಸತಿ ನಿಲಯದ ಮೇಲೆ ದಾಳಿ ಮಾಡಿ 27 ಪುರುಷರು ಮತ್ತು 20 ಮಹಿಳೆಯರು, ಐವರು ಮೇಲ್ವಿಚಾರಕರು, ನಾಲ್ವರು ತಂಡದ ನಾಯಕರು ಸೇರಿದಂತೆ 47 ಉದ್ಯೋಗಿಗಳನ್ನು ಬಂಧಿಸಿದರು. ಕಾಲ್ ಸೆಂಟರ್ ಯಾವುದೇ ಕಾನೂನು ದಾಖಲೆಗಳನ್ನು ಹೊಂದಿರಲಿಲ್ಲ. ಪೊಲೀಸರು ಸ್ಥಳವನ್ನು ಪರಿಶೀಲಿಸಿದಾಗ 20 ಲಕ್ಷ ರೂ. ನಗದು ಪತ್ತೆಯಾಗಿದೆ. ಕಳೆದ 25 ದಿನಗಳಿಂದ ಫಾರ್ಮ್ಹೌಸ್ನಲ್ಲಿ ನಕಲಿ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಗೌಪ್ಯತೆಯನ್ನು ಕಾಪಾಡುವ ಸಲುವಾಗಿ, ಉದ್ಯೋಗಿಗಳಿಗೆ ಹೊರಗೆ ಹೋಗಲು ಅಥವಾ ಯಾರೊಂದಿಗೂ ಮಾತನಾಡಲು ಅವಕಾಶವಿರಲಿಲ್ಲ.
ಉದ್ಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕರು ದೆಹಲಿ, ಹರಿಯಾಣ ಮತ್ತು ಗುರುಗ್ರಾಮದ ನಿವಾಸಿಗಳಾಗಿದ್ದರು. ಬಂಧಿತರನ್ನು ವಿಚಾರಣೆಗೊಳಪಡಿಸಿ ನಕಲಿ ಕಾಲ್ ಸೆಂಟರ್ ಬಗ್ಗೆ ತನಿಖೆ ನಡೆಸಿದಾಗ ದಂಧೆ ಅಗಾಧವಾಗಿರುವುದು ಅರಿವಾಯಿತು. ಇಲ್ಲಿಯವರೆಗೆ, ಆಸ್ಟ್ರೇಲಿಯಾ ಪ್ರಜೆಗಳಿಗೆ ಲಕ್ಷಾಂತರ ಡಾಲರ್ಗಳನ್ನು ವಂಚಿಸಲು ಯುಕೆ ಮತ್ತು ಯುಎಸ್ನ ವಿದೇಶಿ ಪ್ರಜೆಗಳು ಕಾಲ್ ಸೆಂಟರ್ಗೆ ಹಣಕಾಸಿನ ನೆರವು ನೀಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕಾಲ್ ಸೆಂಟರ್ಗಳಿಗೆ ಸಿಬ್ಬಂದಿಯನ್ನು ಒದಗಿಸುವ ದೆಹಲಿ ಮತ್ತು ಹರಿಯಾಣದ ಏಜೆಂಟ್ಗಳ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ನೌಕರರ ವಿಚಾರಣೆಯಿಂದ ತಿಳಿದುಬಂದಿದೆ. ಬೆಳಗ್ಗೆ 3ರಿಂದ ಸಂಜೆ 4ರವರೆಗೆ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಅವರೆಲ್ಲರೂ ಕಾಲ್ ಸೆಂಟರ್ಗಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿದಿದ್ದರು. ಆದರೆ, ಅದು ಜನರನ್ನು ವಂಚಿಸುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ದೆಹಲಿಯ ವ್ಯಕ್ತಿಯ ಹೆಸರನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಕಂಪ್ಯೂಟರ್ಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.