ಬುಲಂದ್ ಶಹರ್: ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ವಿವಾಹಿತೆಯ ಮೇಲೆ ಆಕೆಯ ಗಂಡನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿರುವ ವ್ಯಕ್ತಿಯ ಪತ್ನಿ ಮೇಲೆ ಬುಲಂದ್ ಶಹರ್ ಜಿಲ್ಲೆಯ ಅಹರ್ ಪ್ರದೇಶದ ಹಳ್ಳಿಯಲ್ಲಿ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಸಂತ್ರಸ್ತೆಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಆಕೆಯನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸಿದ್ದು, ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳನ್ನು ಬಾಬ್ಲೂ ಮತ್ತು ಲೋಕೇಶ್ ಎಂದು ಗುರುತಿಸಲಾಗಿದೆ. ಪಾನೀಯದಲ್ಲಿ ಮತ್ತು ಬರುವ ವಸ್ತು ಬೆರೆಸಿ ಕೊಟ್ಟಿದ್ದ ಆರೋಪಿಗಳು ಇಂತಹ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ.
ನಾಲ್ಕು ತಿಂಗಳ ಹಿಂದೆ ಪತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆತನ ಸ್ನೇಹಿತರಾದ ಲೋಕೇಶ್ ಮತ್ತು ಬಾಬ್ಲೂ ಮನೆಗೆ ಆಗಮಿಸಿದ್ದರು. ಪತಿ ಕೊಟ್ಟು ಕಳುಹಿಸಿರುವುದಾಗಿ ಕೂಲ್ ಡ್ರಿಂಕ್ಸ್ ಕೊಟ್ಟಿದ್ದು, ಅದನ್ನು ಕುಡಿದ ನಂತರ ಪ್ರಜ್ಞಾಹೀನಳಾಗಿದ್ದ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಶ್ಲೀಲ ಫೋಟೋ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು ಮನೆಗೆ ಬಂದ ಪತಿಗೆ ತಿಳಿಸಿದರೆ ಆತ ನನ್ನ ಮೇಲೆಯೇ ಹಲ್ಲೆ ನಡೆಸಿ ಆರೋಪಿಗಳಿಗೆ ಬೆಂಬಲಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಅಶ್ಲೀಲ ಫೋಟೋಗಳನ್ನು ತೋರಿಸಿ ಬ್ಲಾಕ್ಮೇಲ್ ಮಾಡುವ ಮೂಲಕ ಆರೋಪಿಗಳು ಪದೇಪದೇ ಅತ್ಯಾಚಾರ ಎಸಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಅಶ್ಲೀಲ ಫೋಟೋ ವೈರಲ್ ಮಾಡಿದ್ದಾರೆ. ಮಹಿಳೆಯ ಪತಿ ಮನೆಯಲ್ಲಿಯೇ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಇಸ್ಪೀಟ್ ಆಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಕೆಯ ಗಂಡ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.