ಬೆಂಗಳೂರು: ರಾಜ್ಯದ ನಗರ ಪ್ರದೇಶದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕವನ್ನು ನಗರಾಭಿವೃದ್ಧಿ ಇಲಾಖೆ ಇಳಿಕೆ ಮಾಡಲು ನಿರ್ಧರಿಸಿದ್ದು ಈ ಸಂಬಂಧ ಮಾರ್ಚ್ 10 ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.
ದರ ನಿಗದಿಗೆ ಈ ಹಿಂದಿನ ಪದ್ಧತಿಯನ್ನು ಕೈಬಿಡಲು ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಆಯಾ ಯೋಜನಾ ಪ್ರದೇಶಗಳಲ್ಲಿನ ಜನಸಂಖ್ಯೆ ಆಧರಿಸಿ ಪರಿಷ್ಕೃತ ದರ ನಿಗದಿ ಮಾಡಲಾಗಿದೆ.
ಕಟ್ಟಡದ ಮಾರ್ಗಸೂಚಿ ದರದ ಒಟ್ಟು ಮೌಲ್ಯದ ಶೇಕಡಾ 0.1 ರಿಂದ ಶೇಕಡ 0.5 ರವರೆಗೆ ಶುಲ್ಕ ವಿಧಿಸುವ ಪ್ರಸ್ತಾಪವಿದೆ. 1993 ರಿಂದಲೂ ಕಟ್ಟಡದ ಪ್ರತಿ ಚ. ಅಡಿಗೆ 20 ರೂಪಾಯಿ ಕನಿಷ್ಠ ದರ ಆಧಾರದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ವಿಧಿಸುವ ನಿಯಮ ಜಾರಿಯಲ್ಲಿತ್ತು.
ಅದನ್ನು ಪರಿಷ್ಕರಿಸಿ 2020 ಫೆಬ್ರವರಿ 25 ರಿಂದ ಪೂರ್ವಾನ್ವಯವಾಗುವಂತೆ ಸೆಪ್ಟೆಂಬರ್ ನಲ್ಲಿ ಆದೇಶ ಹೊರಡಿಸಲಾಗಿತ್ತು. ನಕ್ಷೆ ಮಂಜೂರಾತಿ ಶುಲ್ಕದ ಒಟ್ಟು ಮೊತ್ತದ ಶೇಕಡ 8 ರಷ್ಟು ಅಭಿವೃದ್ಧಿ ಶುಲ್ಕ ಪಾವತಿ ಕಡ್ಡಾಯ ಮಾಡಲಾಗಿದ್ದು, ವಸತಿ ಕಟ್ಟಡಗಳಿಗೆ ಸ್ಥಿರಾಸ್ತಿ ಮಾರ್ಗಸೂಚಿ ದರದ ಶೇಕಡ 0.5 ರಷ್ಟು ಶುಲ್ಕವಿದ್ದು, ಅದೇ ರೀತಿ ಕೈಗಾರಿಕೆ ಕಟ್ಟಡಗಳಿಗೆ, ಬಹುಮಹಡಿ ಕಟ್ಟಡಗಳಿಗೆ, ಇತರೆ ಸ್ವರೂಪದ ಕಟ್ಟಡಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ರೀತಿ ಶುಲ್ಕ ನಿಗದಿಪಡಿಸಲಾಗಿದ್ದು, ಇದಕ್ಕೆ ರಿಯಲ್ ಎಸ್ಟೇಟ್ ಸೇರಿ ವಿವಿಧ ವಲಯದಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟ ಉಂಟಾಗಿರುವ ಹಿನ್ನಲೆಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಪರಿಷ್ಕರಿಸಿ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿದೆ.