ಚಾಮರಾಜನಗರ : ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ನಟ ಗಣೇಶ್ ಬೃಹತ್ ಕಟ್ಟಡ ನಿರ್ಮಿಸುತ್ತಿದ್ದು, ಪರಿಸರವಾದಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು.
ನಂತರ ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ಅರಣ್ಯಾಧಿಕಾರಿ ನೋಟಿಸ್ ನೀಡಿದ್ದರು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ನಟ ಗಣೇಶ್ ಗೆ ಎಸಿಎಫ್ ವರದಿ ಅನ್ವಯ ನೋಟಿಸ್ ಕೊಟ್ಟಿದ್ದರು. ಬಳಿಕ ಗಣೇಶ್ ಕಾಮಗಾರಿ ಸ್ಥಗಿತಗೊಳಿಸಿದ್ದರು. ಇದೀಗ ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ಹೌದು. ಅರಣ್ಯ ಇಲಾಖೆ ನೋಟಿಸ್ ಪ್ರಶ್ನಿಸಿ ನಟ ಗಣೇಶ್ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗಣೇಶ್ ಪರ ಹಿರಿಯ ವಕೀಲ ಸಿ.ಕೆ. ನಂದಕುಮಾರ್ ಅವರು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ. ಕೇವಲ ಭೂಮಿ ಸಮತಟ್ಟು ಮಾಡಿ ಸ್ಥಳಾಂತರಿಸಬಹುದಾದ ಸ್ಟೀಲ್ ಕಟ್ಟಡ ಮಾತ್ರ ನಿರ್ಮಿಸಲಾಗುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ನೋಟೀಸ್ಗೆ ತಡೆಯಾಜ್ಞೆ ನೀಡಬೇಕು’ ಎಂದು ಗಣೇಶ್ ಪರ ವಕೀಲರು ಮನವಿ ಮಾಡಿದರು. ಶಾಶ್ವತ ಕಟ್ಟಡಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಅರಣ್ಯ ಇಲಾಖೆ ನೀಡಿರುವ ನೋಟೀಸ್ಗೆ 1 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ನಟ ಗಣೇಶ್ಗೆ ಸೂಚಿಸಿದೆ. ನಾಲ್ಕು ವಾರದಲ್ಲಿ ವಿಚಾರಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
ನಟ ಗಣೇಶ್ ವಿರುದ್ಧ ವಾಸ ಮತ್ತು ಕೃಷಿ ಉದ್ದೇಶದಿಂದ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಬೃಹತ್ ಕಟ್ಟಡ ನಿರ್ಮಿಸುತ್ತಿರುವ ಆರೋಪ ಕೇಳಿ ಬಂದಿತ್ತು. ಕಟ್ಟಡ ನಿರ್ಮಾಣಕ್ಕೆ ದೊಡ್ಡ ಗಾತ್ರದ ಕಾಂಕ್ರೀಟ್ ಪಿಲ್ಲರ್ ಗಳನ್ನು ಹಾಕಲಾಗಿದ್ದು, ಜೆಸಿಬಿ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.