ಧಾರವಾಡ: ಫ್ಲ್ಯಾಟ್ ಖರೀದಿ ಒಪ್ಪಂದ ಉಲ್ಲಂಘಿಸಿದ ಬಿಲ್ಡರ್ ಗೆ 5.95 ಲಕ್ಷ ರೂ ದಂಡ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗದಿಂದ ಆದೇಶ ನೀಡಿದೆ.
ಹುಬ್ಬಳ್ಳಿಯ ಕುಲಕರ್ಣಿಗಲ್ಲಿ, ಯಲ್ಲಾಪೂರ ಓಣಿಯ ಪ್ರಲ್ಹಾದ ಜಹಾಗೀರದಾರ ಎಂಬುವವರು ಪೃಥ್ವಿ ಬಿಲ್ಡರ್ಸ್ ಹಾಗೂ ಡೆವಲಪರ್ಸ್‍ರವರು ಈಟಿಗಟ್ಟಿ ಗ್ರಾಮದ ಬ್ಲಾಕ್ ನಂ.22/1 ರಲ್ಲಿ ನೂತನವಾಗಿ ಅಭಿವೃಧ್ದಿಪಡಿಸುತ್ತಿರುವ ಲೇಔಟನಲ್ಲಿ ಪ್ಲಾಟ ನಂ.30 ನ್ನುಖರೀದಿಸುವ ಕುರಿತುಖರೀದಿ ಕರಾರುಒಪ್ಪಂದ ಮಾಡಿಕೊಂಡಿದ್ದರು.
ದೂರುದಾರರು ಒಟ್ಟು 5 ಲಕ್ಷದ 23 ಸಾವಿರ ರೂಪಾಯಿಗಳನ್ನು ಪಾವತಿಸಿದ್ದರು. ಆದರೆ ಡೆವಲಪರ್ಸ್‍ರವರು ಖರೀದಿ ಕರಾರು ಒಪ್ಪಂದದಂತೆ ನಿವೇಶನಗಳನ್ನು ಅಭಿವೃಧ್ದಿಪಡಿಸುವಲ್ಲಿ ವಿಫಲರಾಗಿದ್ದು, ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಒಂದಿಲ್ಲೊಂದು ನೆಪ ಹೇಳಿ ಖರೀದಿ ಪತ್ರ ಬರೆದುಕೊಡದೇ ಬಿಲ್ಡರ ಸತಾಯಿಸಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ದೂರುದಾರ ಬಿಲ್ಡರ್ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ, ಪ್ರಭು. ಸಿ. ಹಿರೇಮಠ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರವರು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ದೂರುದಾರನಿಗೆ ನಿವೇಶನ ಅಭಿವೃದ್ದಿಪಡಿಸಿ ಖರೀದಿ ಪತ್ರ ನೋಂದಣಿ ಮಾಡಿಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಅದಕ್ಕಾಗಿ ದೂರುದಾರರಿಂದ ಪಡೆದ 5 ಲಕ್ಷದ 95 ಸಾವಿರ ರೂಪಾಯಿ ಮೇಲೆ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಹಾಗೂ ಮಾನಸಿಕ ತೊಂದರೆಗೆ 50,000 ರೂ. ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ 10,000 ರೂ.ಗಳನ್ನು ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.