ಜನನದ 6 ತಿಂಗಳ ಬಳಿಕ ಸಾಮಾನ್ಯವಾಗಿ ಮಗುವಿಗೆ ಇತರ ಆಹಾರಗಳನ್ನು ನಿಧಾನವಾಗಿ ಕೊಡಲಾರಂಭಿಸುತ್ತಾರೆ. ಮೇಲು ಹಾಲಿನಿಂದ ಈ ಜರ್ನಿ ಶುರುವಾಗುತ್ತದೆ. ಸಾಮಾನ್ಯವಾಗಿ ಶಿಶುವಿಗೆ ಎದೆಹಾಲು ಬಿಟ್ಟರೆ ಹಸುವಿನ ಹಾಲನ್ನೇ ಕೊಡಲಾಗುತ್ತದೆ. ಹಸುವಿನ ಹಾಲು ಮಕ್ಕಳಿಗೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ ಎಮ್ಮೆಯ ಹಾಲನ್ನು ಮಕ್ಕಳಿಗೆ ಕೊಡಲು ಜನರು ಹಿಂದೇಟು ಹಾಕುತ್ತಾರೆ. ಹಾಗಿದ್ದರೆ ಎಮ್ಮೆಯ ಹಾಲು ಆರೋಗ್ಯಕರವಲ್ಲವೇ ಎಂಬ ಗೊಂದಲ ಅನೇಕರಲ್ಲಿರಬಹುದು.
ಎಮ್ಮೆಯ ಹಾಲು ಕುಡಿದರೆ ಬುದ್ಧಿಶಕ್ತಿ ಕೂಡ ಎಮ್ಮೆಯಂತೆಯೇ ಆಗುತ್ತದೆ ಎಂದು ಹಿರಿಯರು ಹೇಳಿದ್ದನ್ನು ನೀವು ಕೂಡ ಕೇಳಿರಬಹುದು. ಇದರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ತಿಳಿಯೋಣ.
ಆಯುರ್ವೇದ ತಜ್ಞರ ಪ್ರಕಾರ ಎಮ್ಮೆಯ ಹಾಲಿನ ಬಗ್ಗೆ ಅನೇಕರಲ್ಲಿ ತಪ್ಪು ತಿಳುವಳಿಕೆಗಳಿವೆ. ಎಮ್ಮೆಯ ಹಾಲು ಮಕ್ಕಳಿಗೆ ಹಾನಿಕಾರಕವಲ್ಲ, ಇದು ಕೂಡ ಹಸುವಿನ ಹಾಲಿನಷ್ಟೇ ಪೋಷಕಾಂಶಗಳಿಂದ ಕೂಡಿದೆ.
ಹಸುವಿನ ಹಾಲಿಗಿಂತ ಹೆಚ್ಚು ಪ್ರೋಟೀನ್!
ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಕೊಬ್ಬು ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿಯೇ ಇದು ಹೆಚ್ಚು ರುಚಿಕರ. ಆದರೆ ಕೆಲವು ಮಕ್ಕಳಿಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗಬಹುದು. ಇದೇ ಕಾರಣಕ್ಕೆ ಚಿಕ್ಕ ಮಕ್ಕಳಿಗೆ ಎಮ್ಮೆ ಹಾಲು ನೀಡುವುದಿಲ್ಲ.
ಎಮ್ಮೆ ಹಾಲು ಮಕ್ಕಳ ಬೌದ್ಧಿಕ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಕ್ಕಳ ಮಾನಸಿಕ ಬೆಳವಣಿಗೆಗೆ ಎಮ್ಮೆ ಹಾಲು ಕೂಡ ಪೂರಕವಾಗಿದೆ. ಮಕ್ಕಳ ಒಟ್ಟಾರೆ ಆರೋಗ್ಯ ಮತ್ತು ಜೀರ್ಣಕಾರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಬೇಕು.
ಮಗುವಿಗೆ ಯಾವ ಹಾಲು ಸೂಕ್ತ ಎಂಬುದನ್ನು ಹೆತ್ತವರು ನಿರ್ಧರಿಸಬೇಕು. ಎಮ್ಮೆಯ ಹಾಲು ಕುಡಿದ ಬಳಿಕವೂ ಮಗುವಿಗೆ ಜೀರ್ಣಕಾರಿ ಸಮಸ್ಯೆ ಆಗದೇ ಇದ್ದಲ್ಲಿ ಅದನ್ನೇ ಕೊಡಬಹುದು. ಎಮ್ಮೆಯ ಹಾಲು ಗಾಢವಾಗಿರುತ್ತದೆ, ಹಾಗಾಗಿ ಕೊಂಚ ನೀರು ಬೆರೆಸಿ ಮಕ್ಕಳಿಗೆ ಕುಡಿಸಬಹುದು.