ಬೆಂಗಳೂರು: ಈ ಬಾರಿಯ ಬಜೆಟ್ ನಲ್ಲಿ ‘ಗೃಹಿಣಿ ಶಕ್ತಿ ಯೋಜನೆ’ ಘೋಷಣೆ ಮಾಡಲಾಗಿದ್ದು, ಈ ಯೋಜನೆ ಅಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು.
ಬಜೆಟ್ ನಲ್ಲಿ ಘೋಷಿಸಲಾದ ಯೋಜನೆಗೆ ಬಜೆಟ್ ಅನುಮೋದನೆ ದೊರೆತ ತಕ್ಷಣ ಜಾರಿಗೊಳಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳಾ ಸಬಲೀಕರಣಕ್ಕಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಒಂದು ಲಕ್ಷ ಮಹಿಳೆಯರಿಗೆ ಗೃಹ ಆಧಾರಿತ ಉದ್ಯಮ ಬಗ್ಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು. ಸ್ವಾವಲಂಬಿ ಬದುಕಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಗುಡ್ಡಗಾಡು ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ಅಂಗನವಾಡಿಗಳಲ್ಲಿ ಮಾತೃಪೂರ್ಣ ಯೋಜನೆಯಲ್ಲಿ ಬಿಸಿಯೂಟ ಸೇವಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಆರು ಜಿಲ್ಲೆಗಳಲ್ಲಿ ಫಲಾನುಭವಿಗಳ ಮನೆಗಳಿಗೆ ಆಹಾರ ಧಾನ್ಯ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.