ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಿರಾಶದಾಯಕ ಮತ್ತು ಅಡ್ಡಕಸುಬಿ ಬಜೆಟ್. ಮುಖ್ಯಮಂತ್ರಿ ಕ್ಷೇತ್ರಕ್ಕೆ ಒಂದಷ್ಟು ಯೋಜನೆ ಕೊಟ್ಟಿದ್ದಾರೆ. ಇದು ಶಿಗ್ಗಾಂವಿ ಬಜೆಟ್ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಜೆಟ್ ಗೆ ಯಾವುದೇ ದಿಕ್ಕು, ದೂರದೃಷ್ಟಿ ಇಲ್ಲ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲವೇ ಅಲ್ಲ. ಟೀಕೆ ಮಾಡಬೇಕು ಎಂದು ಹೇಳುತ್ತಿಲ್ಲ. ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಜೂನ್ 30 ರವರೆಗೆ ಮಾತ್ರ ರಾಜ್ಯಕ್ಕೆ ಜಿಎಸ್ಟಿ ಪರಿಹಾರ ಸಿಗುತ್ತದೆ. ನಂತರ ಜಿಎಸ್ಟಿ ಪರಿಹಾರ ಸಿಗುವುದಿಲ್ಲ. ಜಿಎಸ್ಟಿ ಪರಿಹಾರ ಇನ್ನೂ 5 ವರ್ಷ ಮುಂದುವರೆಸಲು ಹೇಳಿದ್ದೆ. ಆದರೆ, ಇವರು ಮನವಿ ಮಾಡಿಲ್ಲ. ಕೇಂದ್ರ ಸರ್ಕಾರ ಕೂಡ ಇದರ ಬಗ್ಗೆ ಹೇಳಿಲ್ಲ. ಇದಕ್ಕೆ ನಾನು ಇವರನ್ನು ಹೇಡಿ ಸರ್ಕಾರ ಎಂದು ಕರೆಯುವುದು. ಜಿಎಸ್ಟಿ ಕೌನ್ಸಿಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಲಾಟೆ ಮಾಡಿ ಇನ್ನು ಐದು ವರ್ಷ ಜಿಎಸ್ಟಿ ಪರಿಹಾರ ನೀಡುವುದನ್ನು ಮುಂದುವರೆಸಲು ಒತ್ತಡ ತರಬೇಕಿತ್ತು. ಜಿಎಸ್ಟಿ ಪರಿಹಾರ ಸಿಗದಿದ್ದರೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತದೆ ಎಂದು ರಾಜ್ಯ ಬಜೆಟ್ ಬಗ್ಗೆ ವಿಪಕ್ಷನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.