
ಬೆಂಗಳೂರು: ಇಂದಿನಿಂದ ಫೆ. 24 ರವರೆಗೆ ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭವಾಗಲಿದೆ. ಪ್ರಸಕ್ತ ಅವಧಿಯ ವಿಧಾನ ಮಂಡಲದ ಕೊನೆಯ ಅಧಿವೇಶನ ಇದಾಗಿದ್ದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ಅಧಿವೇಶನ ವೇದಿಕೆಯಾಗಲಿದೆ.
ರಾಜ್ಯಪಾಲ ಗೆಹ್ಲೊಟ್ ಪ್ರಸಕ್ತ ವರ್ಷದ ಮೊದಲ ಅಧಿವೇಶನ ಆಗಿರುವ ಕಾರಣ ಇಂದು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ.
ವಿಧಾನಸೌಧದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವಿಧಾನಸೌಧ ಸುತ್ತಮುತ್ತ ಐದು ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಸಭೆಗಳ ಆಯೋಜನೆಗೆ ನಿಷೇಧ ಹೇರಲಾಗಿದೆ. ಯಾವುದೇ ಪ್ರತಿಕೃತಿಗಳ ಪ್ರದರ್ಶನ, ದಹನ ಮಾಡುವಂತಿಲ್ಲ.