ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು 2024-25 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಸಮ್ಮಿಶ್ರ ಸರ್ಕಾರ ಇರುವ ಕಾರಣ ಬಜೆಟ್ ಮಂಡನೆ ವೇಳೆ ಅನೇಕ ವಿಷ್ಯಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿಟ್ಟುಕೊಳ್ಳಲಿದೆ.
ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಉದ್ಯಮ: ಕೃತಕ ಬುದ್ಧಿಮತ್ತೆಯ ಸುತ್ತ ನಿಯಂತ್ರಕ ಚೌಕಟ್ಟು ತರುವ ಅನಿವಾರ್ಯತೆ ಇದೆ. ಅನೇಕ ಸಂಸ್ಥೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುತ್ತಿದೆ. ಈ ಸಮಯದಲ್ಲಿ ಗ್ರಾಹಕರ ಖಾಸಗಿ ಡೇಟಾ ಹಂಚಿಕೆಯಾಗ್ತಿದೆ ಎನ್ನುವ ಆರೋಪವಿದ್ದು, ಅದನ್ನು ರಕ್ಷಿಸುವುದು ಕಡ್ಡಾಯವಾಗಿದೆ. ಗ್ರಾಹಕರು ಮತ್ತು ವಿಷಯ ರಚನೆಕಾರರ ಹಕ್ಕುಸ್ವಾಮ್ಯದ ವಿಷಯವನ್ನು ರಕ್ಷಿಸಲು ನಿಯಂತ್ರಕ ಚೌಕಟ್ಟಿನ ಅಗತ್ಯವಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಅನ್ನು ಬದಲಿಸಲು ಪ್ರಸ್ತಾಪಿಸಲಾದ ಹೊಸ ಡಿಜಿಟಲ್ ಡೇಟಾ ಬಿಲ್‌ನ ಭಾಗವಾಗಿ ಇದನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.
ಸಹಕಾರಿ ಬ್ಯಾಂಕ್ ಬಲವರ್ಧನೆ ಯೋಜನೆ : ಸಹಕಾರಿ ಬ್ಯಾಂಕ್‌ಗಳನ್ನು ಬಲಪಡಿಸುವ ಮಾರ್ಗಸೂಚಿಯನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ, ಮೈಕ್ರೋ ಫೈನಾನ್ಸ್ ಬ್ಯಾಂಕ್‌ಗಳಂತಹ ಪರ್ಯಾಯ ರಚನೆಗಳಿಗೆ ಒತ್ತು ನೀಡುವ ಸಂಭವವಿದೆ.
ವಿದೇಶಿ ಬ್ಯಾಂಕ್‌ಗಳಿಗೆ ತೆರಿಗೆ ದರವನ್ನು ತರ್ಕಬದ್ಧಗೊಳಿಸುವುದು : ಭಾರತೀಯ ಬ್ಯಾಂಕ್‌ಗಳು ಮತ್ತು ವಿದೇಶಿ ಬ್ಯಾಂಕುಗಳಿಗೆ ಅನ್ವಯವಾಗುವ ತೆರಿಗೆ ದರಗಳಲ್ಲಿ ಭಾರಿ ವ್ಯತ್ಯಾಸವಿದೆ ಮತ್ತು ಅದನ್ನು ತೆಗೆದುಹಾಕುವುದರಿಂದ ವಿದೇಶಿ ಬ್ಯಾಂಕುಗಳು ದೇಶದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಇದು ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ನೆರವಾಗುತ್ತದೆ.
ಗಡಿಯಾಚೆಗಿನ ಪಾವತಿ ಮೂಲಸೌಕರ್ಯಗಳ ಮೇಲೆ ನಿರಂತರ ಗಮನ : ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ರಾಷ್ಟ್ರದ ಇಂಧನ ಭದ್ರತೆ ಅಥವಾ ಆಹಾರ ಭದ್ರತೆಯ ಅಗತ್ಯಗಳ ಮೇಲೆ ನಿರ್ಬಂಧಗಳ ಸಾಧ್ಯತೆಯನ್ನು ಗಮನಿಸಿದರೆ, ಸರ್ಕಾರ ಗಡಿಯಾಚೆಗಿನ ಪಾವತಿಗಳ ಮೇಲೆ ಬಜೆಟ್ ನಲ್ಲಿ ಗಮನ ನೀಡುವ ಸಾಧ್ಯತೆ ಇದೆ.