ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಅವರು ಬಜೆಟ್ ಮಂಡಿಸಲಿದ್ದು, ಉದ್ಯಮ ವಲಯಕ್ಕೆ ಹೆಚ್ಚಿನ ಕೊಡುಗೆ ನೀಡುವ ಸಾಧ್ಯತೆ ಇದೆ.
ಆಟೋಮೋಟಿವ್ ವಲಯವು ಬಜೆಟ್ ನಲ್ಲಿ ಮಹತ್ವದ ಘೋಷಣೆ ನಿರೀಕ್ಷಿಸುತ್ತಿದೆ. ವಿದ್ಯುತ್ ವಾಹನಗಳನ್ನು ಉತ್ತೇಜಿಸುವತ್ತ ಸರ್ಕಾರ ಗಮನ ಹರಿಸಿದ್ದು, ವಿದ್ಯುತ್ ವಾಹನ ಮೂಲಸೌಕರ್ಯ, ಸೇವಾ ಕೇಂದ್ರಗಳಿಗೆ ಹಣಕಾಸು ಮತ್ತು ಪ್ರೋತ್ಸಾಹ, ಹಸಿರು ತಂತ್ರಜ್ಞಾನಕ್ಕಾಗಿ ತೆರಿಗೆ ವಿನಾಯಿತಿ ನಿರೀಕ್ಷಿಸಲಾಗಿದೆ.
ಇನ್ನು ದೇಶಿಯ ಉತ್ಪಾದನೆ ಉತ್ತೇಜಿಸಲು ಉತ್ಪಾದನಾ ವಲಯವು ಹೆಚ್ಚಿನ ಸಾಲ ಮತ್ತು ಇತರೆ ಉತ್ತೇಜನ ಕ್ರಮಗಳನ್ನು ನಿರೀಕ್ಷಿಸಿದೆ. ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ, ಎಂಎಸ್ಎಂಇಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯಿತಿ, ವರ್ಧಿತ ರಫ್ತು ಪ್ರೋತ್ಸಾಹ ಸೇರಿ ಕೆಲವು ನಿರೀಕ್ಷೆ ಇದೆ.
ರಿಯಲ್ ಎಸ್ಟೇಟ್ ವಲಯವು ಬಜೆಟ್ ನಲ್ಲಿ ಉತ್ತೇಜನ ಬಯಸಿದ್ದು, ಗೃಹ ಸಾಲಗಳ ಬಡ್ಡಿ ಪಾವತಿಗಳ ಮೇಲಿನ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು ಮತ್ತು ಕೈಗೆಟಕುವ ವಸತಿ ಯೋಜನೆಗಳನ್ನು ನಿರೀಕ್ಷಿಸಲಾಗಿದೆ.