ಕೋವಿಡ್ -19 ಸಾಂಕ್ರಾಮಿಕವು ನಾವು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ತರಗತಿಗಳಿಗೆ ಹಾಜರಾಗಲು ಶಾಲೆಗೆ ಹೋಗದ ಮಕ್ಕಳಿಂದ ಹಿಡಿದು ಮನೆಗಳಿಂದಲೇ ಕೆಲಸ ಮಾಡುವವರೆಗೆ ಸಾಮಾನ್ಯ ಜನರಿಗೆ ಹೊಸ ಸಾಧ್ಯತೆಗಳು ಹಾಗೂ ಸವಾಲುಗಳು ಎದುರಾಗಿವೆ.
ಕೋವಿಡ್ ನಿರ್ಬಂಧಗಳ ನಡುವೆ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಹೊಸ ರೀತಿಯ ವೆಚ್ಚಗಳ ಕಾರಣದಿಂದಾಗಿ ಮನೆಯ ಬಜೆಟ್‌ಗಳು ಬದಲಾಗಿ ಹೋಗಿವೆ. ಸಾಂಕ್ರಾಮಿಕದ ಮೊದಲು ಆಫೀಸ್‌ಗಳಲ್ಲಿ-ಗುಣಮಟ್ಟದ ವೈಫೈ, ವರ್ಕ್‌ಸ್ಟೇಷನ್, ಮಕ್ಕಳಿಗಾಗಿ ಲ್ಯಾಪ್‌ಟಾಪ್‌ಗಳಂತಹ ವೆಚ್ಚಗಳ ಬಗ್ಗೆ ಯಾರೂ ಚಿಂತಿಸುತ್ತಿರಲಿಲ್ಲ.
ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ವ್ಯಾಪಾರಗಳ ಮಾಲೀಕರಿಗೆ ಹೊಸ ಸವಾಲುಗಳ ನಡುವೆ, 2022ರ ಕೇಂದ್ರ ಬಜೆಟ್ ಮನೆಯಿಂದಲೇ ಕೆಲಸ ಮಾಡುವ ಮಂದಿಗೆ ಒಳ್ಳೆಯ ಸುದ್ದಿಯನ್ನು ತರಬಹುದು ಎನ್ನಲಾಗುತ್ತಿದೆ. ಸಂಬಳ ಪಡೆಯುವ ವ್ಯಕ್ತಿಗಳು ಕಳೆದ ಕೆಲವು ವರ್ಷಗಳಿಂದ ಬಜೆಟ್‌ಗಳಲ್ಲಿ ಹೆಚ್ಚಿನ ಪರಿಹಾರವನ್ನು ಕಂಡಿಲ್ಲ, ಆದರೆ ಈಗ ಮನೆಯಿಂದ ಕೆಲಸ ಮಾಡುವ ಭತ್ಯೆಗಳಿಂದ ಒಂದಷ್ಟು ಪ್ರಯೋಜನಗಳನ್ನು ಪಡೆಯಬಹುದು.
ಮನೆಯಿಂದ ಕೆಲಸದ ಭತ್ಯೆಗೆ ಬೇಡಿಕೆ
ತೆರಿಗೆ ಸೇವೆಗಳು ಮತ್ತು ಹಣಕಾಸು ಸೇವೆಗಳ ಕಂಪನಿ ಡೆಲಾಯ್ಟ್ ಇಂಡಿಯಾ ಇತ್ತೀಚೆಗೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಭತ್ಯೆಯ ಲಾಭವನ್ನು ಕೋರಿದೆ. ನೇರ ಪ್ರಯೋಜನವನ್ನು ನೀಡಲಾಗದ ಕಾರಣ ತೆರಿಗೆ ಸಂಬಂಧಿತ ಸಡಿಲಿಕೆಗಳಿಗೆ ನಿಬಂಧನೆಯನ್ನು ಮಾಡಬೇಕು ಎಂದು ಆಗ್ರಹಿಸಲಾಗಿದೆ. ಕಂಪನಿಯು ಬ್ರಿಟನ್‌ನಲ್ಲಿ ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯ ಉಲ್ಲೇಖ ಮಾಡಿದೆ.
ಹಣಕಾಸು ಸಚಿವಾಲಯವು ಬೇಡಿಕೆಯನ್ನು ಒಪ್ಪಿಕೊಂಡರೆ, ತಂತಮ್ಮ ಸ್ಥಳಗಳಿಂದ ಕೆಲಸ ಮಾಡುವ ನೌಕರರು 50,000 ರೂ.ವರೆಗಿನ ಮನೆಯಿಂದ ಕೆಲಸದ ಭತ್ಯೆಯನ್ನು ಪಡೆಯಬಹುದು. ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ಕೂಡ ಇದೇ ರೀತಿಯ ವಿನಂತಿಯನ್ನು ಮಾಡಿದೆ.
ಪ್ರಮಾಣಿತ ಕಡಿತದ ಮಿತಿ ವಿಸ್ತರಣೆಯಾಗುವುದೇ ?
ಐಸಿಎಐ ತೆರಿಗೆ ಪಾವತಿದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯಲ್ಲಿ ಪರಿಹಾರವನ್ನು ಕೋರಿದೆ. ಪ್ರಸ್ತುತ ಸ್ಟ್ಯಾಂಡರ್ಡ್ ಡಿಡಕ್ಷನ್‌ನ ಮಿತಿ 50,000 ರೂ.ಗಳಾಗಿದ್ದು, ಈ ಮಿತಿಯನ್ನು ಒಂದು ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಲಾಗಿದೆ. ಆದಾಯ ತೆರಿಗೆ ನಿಯಮಗಳ ಸೆಕ್ಷನ್ 10 ರ ಪ್ರಕಾರ ತೆರಿಗೆದಾರರಿಗೆ ಸಡಿಲಿಕೆಗಳನ್ನು ನೀಡಲಾಗುತ್ತದೆ. ಇದು ಹಳೆಯ ನಿಯಮವಾಗಿದೆ ಮತ್ತು ಹಣದುಬ್ಬರದ ದೃಷ್ಟಿಕೋನದಿಂದ ನೋಡಿದಾಗ ರೂ. 50,000 ಮಿತಿಯು ಕಡಿಮೆಯಾಗಿ ಕಂಡುಬರುತ್ತದೆ.