36 ನೇ ಗೋಲ್ಡನ್ ಡಿಸ್ಕ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನ ಬಿಟಿಎಸ್ ಹುಡುಗರು ತಮ್ಮದಾಗಿಸಿಕೊಂಡಿದ್ದಾರೆ. ಜಂಗ್‌ಕುಕ್, ಜಿನ್, ಜಿಮಿನ್, ಜೆ-ಹೋಪ್, ವಿ, ಆರ್‌ಎಂ ಮತ್ತು ಸುಗಾ ಈ ಏಳು ಜನ ಹುಡುಗರು ತಮಗಿರುವ ಫ್ಯಾನ್ ಫಾಲೋಯಿಂಗ್ ನಿಂದ ಕೆ-ಪಾಪ್ ಮಾತ್ರವಲ್ಲ ಇಡೀ ವಿಶ್ವದ ಅತ್ಯಂತ ಫೇಮಸ್ ಮ್ಯೂಸಿಕ್ ಬ್ಯಾಂಡ್ ಆಗಿ ಗುರುತಿಸಿಕೊಂಡಿದ್ದಾರೆ.
ಕೊರೋನಾ ವೈರಸ್ ಸಾಂಕ್ರಾಮಿಕವನ್ನ ಗಮನದಲ್ಲಿರಿಸಿಕೊಂಡು ಈ ಬಾರಿ ಯಾವುದೆ ಲೈವ್ ಪ್ರೇಕ್ಷಕರಿಲ್ಲದೆ, ಮೊದಲೇ ರೆಕಾರ್ಡ್ ಮಾಡಿದ ಪ್ರದರ್ಶನಗಳೊಂದಿಗೆ ಪ್ರಶಸ್ತಿ ಕಾರ್ಯಕ್ರಮ ನಡೆದಿದೆ. ಹಲವಾರು ಕಲಾವಿದರು ಮತ್ತು ಗುಂಪುಗಳು ಟ್ರೋಫಿಗಳನ್ನ ಗೆದ್ದರು, ಆದರೆ ಬಿಟಿಎಸ್ ಹುಡುಗರು ಮೆಗಾ ಶೋನ ಮೆಗಾ ಪ್ರೈಜ಼್ ಗೆದ್ದಿದ್ದಾರೆ.
2020ರ “BE” ಆಲ್ಬಮ್ ಅನ್ನು ಡಿಸ್ಕ್ ಡೇಸಾಂಗ್, ಅಂದರೆ ವರ್ಷದ ಆಲ್ಬಮ್ ಎಂದು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಸತತ ಐದನೇ ವರ್ಷ ಬಿಟಿಎಸ್ ಹುಡುಗರು ಡಿಸ್ಕ್ ಡೇಸಾಂಗ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ, BTS ಡಿಜಿಟಲ್ ಹಾಡು (ಬೊನ್ಸಾಂಗ್ – ಮುಖ್ಯ ಪ್ರಶಸ್ತಿ), ಅತ್ಯಂತ ಜನಪ್ರಿಯ ಕಲಾವಿದ ಪ್ರಶಸ್ತಿ, ಅತ್ಯುತ್ತಮ ಆಲ್ಬಮ್ (ಬೊನ್ಸಾಂಗ್) ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.
ಪ್ರಶಸ್ತಿಯನ್ನು ಸ್ವೀಕರಿಸುವ ವಿಡಿಯೊ ಸಂದೇಶದಲ್ಲಿ, ಬಿಟಿಎಸ್ ನಾಯಕ ಆರ್‌ಎಂ, ಕೊರೋನವೈರಸ್ ಸಮಯದಲ್ಲಿ ಜನರನ್ನ ಸಾಂತ್ವನಗೊಳಿಸಲು ‘BE’ ಆಲ್ಬನ್ ಅನ್ನು ಮಾಡಲಾಗಿದೆ ಎಂದು ಹೇಳಿದರು. ಅವರು ಪ್ರಶಸ್ತಿಯನ್ನು ತಮ್ಮ ಅಭಿಮಾನಿಗಳಿಗೆ ಸಮರ್ಪಿಸಿದರು. ಕಳೆದ ಐದು ವರ್ಷಗಳಿಂದ ಗೋಲ್ಡನ್ ಡಿಸ್ಕ್ ಪ್ರಶಸ್ತಿಗಳಲ್ಲಿ ನಾವು ಡಿಸ್ಕ್ ಡೇಸಾಂಗ್ ಅನ್ನು ಗೆದ್ದಿದ್ದೇವೆ, ನಿಮ್ಮ ಪ್ರೀತಿಗೆ ನಾವು ಸದಾ ಅಭಾರಿಯಾಗಿರುತ್ತೇವೆ ಎಂದು ಭಾವುಕರಾದರು. ‘BE’ ಎಂಬುದು ನಮ್ಮನ್ನೂ ಒಳಗೊಂಡಂತೆ ಕೊರೋನಾದಿಂದ ಬಳಲುತ್ತಿರುವವರಿಗೆ ಸಾಂತ್ವನ ನೀಡಲು ನಾವು ಮಾಡಿದ ಆಲ್ಬಂ. ನಮಗೆ ಇಷ್ಟು ದೊಡ್ಡ ಪ್ರಶಸ್ತಿ ನೀಡಿದ ಗೋಲ್ಡನ್ ಡಿಸ್ಕ್ ಅವಾರ್ಡ್ಸ್ ಪ್ರತಿನಿಧಿಗಳಿಗೆ ಧನ್ಯವಾದಗಳು ಎಂದಿದ್ದಾರೆ.