ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ‘ಪ್ರಬಲ’ ಖಾತೆ ಸಿಗದೇ ಬೇಸರಗೊಂಡಿರುವ ಆನಂದ್ ಸಿಂಗ್ ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಯಡಿಯೂರಪ್ಪ ಭೇಟಿಯಾದ ಸಚಿವ ಆನಂದ್ ಸಿಂಗ್, ನಾನು ಬಿಜೆಪಿಯವನೇ. ನಿಮ್ಮ ಜೊತೆಗೆ ಇದ್ದವನು. ಬೇರೆಯವರ ರೀತಿ ಹೊರಗಿನಿಂದ ಬಂದವನಲ್ಲ. ಹೊಸಪೇಟೆಯಲ್ಲಿ ಸಮಾಜಸೇವೆ ಮಾಡುತ್ತಿದ್ದೆ. ನನ್ನನ್ನು ಗುರುತಿಸಿ ಪಕ್ಷಕ್ಕೆ ಕರೆತಂದವರು ನೀವೇ. ನನ್ನನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ? ನನ್ನ ಬಗ್ಗೆ ಮಾಡಿದ ಭಾಷಣ ನೆನಪಿಸಿಕೊಳ್ಳಿ. ನನಗೆ ನೀವು ನೀಡಿದ ಭರವಸೆ ಉಳಿಸಿಕೊಳ್ಳಿ. ಉತ್ತಮ ಅವಕಾಶ ಕೊಡುವ ಬಗ್ಗೆ ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಎದುರು ಆನಂದ್ ಸಿಂಗ್ ಬೇಸರ ಹೇಳಿಕೊಂಡಿದ್ದು, ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಉತ್ತಮ ನಿರ್ಧಾರ ತೆಗೆದುಕೊಳ್ಳಿ ಎಂದು ಆನಂದ್ ಸಿಂಗ್ ಅವರಿಗೆ ಬಿಎಸ್ವೈ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಸಂಜೆ 7.30 ಕ್ಕೆ ಆನಂದ್ ಸಿಂಗ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಲಿದ್ದಾರೆ.