ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಚುನಾವಣಾ ರಾಜಕೀಯ ಪ್ರವೇಶಿಸುವುದು ಖಚಿತವಾಗಿದ್ದು, ಇದಕ್ಕಾಗಿ ವೇದಿಕೆ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಯಡಿಯೂರಪ್ಪನವರು ಘೋಷಿಸಿದ್ದರಾದರೂ ಆ ಬಳಿಕ ಬಿಜೆಪಿ ಹೈಕಮಾಂಡ್ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದಿದ್ದರು.
ಆದರೆ ಶಿಕಾರಿಪುರದಿಂದ ಅವರ ಸ್ಪರ್ಧೆಗೆ ಪೂರಕ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಹಲವು ಬಾರಿ ವಿಜಯೇಂದ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಯಡಿಯೂರಪ್ಪನವರಿಗೆ ನೀಡಿದ ಬೆಂಬಲವನ್ನು ನಿಮಗೂ ಸಹ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ.
ಶನಿವಾರದಂದು ಶಿಕಾರಿಪುರ ತಾಲೂಕಿನ ಗೊಗ್ಗ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ನಿರ್ಮಾಣ ಕಾಮಗಾರಿ ಶಂಕುಸ್ಥಾಪನಾ ಸಮಾರಂಭ ನಡೆದಿದ್ದು, ಇದರಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ. ರಾಘವೇಂದ್ರ ತಮ್ಮ ಸಹೋದರ ವಿಜಯೇಂದ್ರ ಅವರಿಗೆ ಕರೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ನನ್ನ ಜನ್ಮದಿನಕ್ಕೆ ಶುಭ ಕೋರಿದ ನಿಮ್ಮೆಲ್ಲರಿಗೂ ಧನ್ಯವಾದ ಎಂದು ಹೇಳಿದರಲ್ಲದೆ ತಂದೆ ಯಡಿಯೂರಪ್ಪನವರು ಹಾಗೂ ಸಹೋದರ ರಾಘವೇಂದ್ರ ಯಾವ ರೀತಿ ಜನತೆಯ ಪ್ರೀತಿ ವಿಶ್ವಾಸ ಉಳಿಸಿಕೊಂಡಿದ್ದಾರೋ ಅದೇ ರೀತಿ ನಾನು ಸಹ ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದಿದ್ದಾರೆ. ಆಗ ಗ್ರಾಮಸ್ಥರು ಭಾವಿ ಶಾಸಕ ವಿಜಯೇಂದ್ರ ಎಂದು ಘೋಷಣೆಗಳನ್ನು ಕೂಗಿದ್ದಾರೆ.