ಹಣಕಾಸು ವಹಿವಾಟು ಆನ್ಲೈನ್ ಆದ ಬಳಿಕ ವಂಚನೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಸೈಬರ್ ವಂಚಕರು ತಂತ್ರಗಾರಿಕೆಯಿಂದ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದು, ಇದರ ಬಿಸಿ ಶಿವಮೊಗ್ಗ ಸಂಸದರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ ಅವರಿಗೂ ತಟ್ಟಿದೆ.
ಸ್ವತಃ ಬಿ.ವೈ. ರಾಘವೇಂದ್ರ ಅವರೇ ಮಂಗಳವಾರದಂದು ಶಿಕಾರಿಪುರದಲ್ಲಿ ನಡೆದ ಡಿಜಿಟಲ್ ಬ್ಯಾಂಕಿಂಗ್ ಕಾರ್ಯಾಗಾರದಲ್ಲಿ ಈ ವಿಷಯ ಹಂಚಿಕೊಂಡಿದ್ದು, ತಮ್ಮ ಒಡೆತನದ ಶಿವಮೊಗ್ಗ ಇಂಜಿನಿಯರಿಂಗ್ ಕಾಲೇಜ್ ಬ್ಯಾಂಕ್ ಖಾತೆಯಿಂದ ಮುಂಬೈನ ಅಂತರಾಷ್ಟ್ರೀಯ ಮಟ್ಟದ ಸೈಬರ್ ವಂಚಕ 16 ಲಕ್ಷ ರೂ. ಡ್ರಾ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಆದರೆ ತಕ್ಷಣವೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದು, ಮುಂಬೈಗೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಈತ ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿರುವ ಸಂಗತಿ ಬಳಕೆಗೆ ಬಂದಿತ್ತು ಎಂದು ಹೇಳಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿದ ಬಳಿಕ ಆತ ಡ್ರಾ ಮಾಡಿಕೊಂಡಿದ್ದ ತಮ್ಮ ಹಣ ಮರಳಿ ಬಂದಿತ್ತು ಎಂದು ಹೇಳಿದ ರಾಘವೇಂದ್ರ ಅವರು, ಹೀಗಾಗಿ ಸಾರ್ವಜನಿಕರು ಆನ್ಲೈನ್ ವಹಿವಾಟು ನಡೆಸುವ ವೇಳೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.