ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ, ಆದರೆ, ಅವರು ಚುನಾವಣೋತ್ತರ ಮೈತ್ರಿಯನ್ನು ತಳ್ಳಿಹಾಕಲಿಲ್ಲ.
ಸೋಮವಾರ ತಮ್ಮ ಜನ್ಮದಿನದಂದು ರಾಜ್ಯ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿ ಹೊಂದುವ ಕುರಿತಾದ ಮಾಧ್ಯಮದ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವು ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಹೋಗಲಿದೆ. ಚುನಾವಣೆಯ ನಂತರದ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಪಕ್ಷವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) 2019ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.
ಮೈತ್ರಿ ನಮಗೆ ಎಂದಿಗೂ ಪ್ರಯೋಜನಕಾರಿಯಾಗಿಲ್ಲ. ಮೈತ್ರಿಯಿಂದ ನಾವು ಹೆಚ್ಚು ನಷ್ಟ ಅನುಭವಿಸುತ್ತೇವೆ. ಈ ಕಾರಣಕ್ಕಾಗಿ, ದೇಶದ ಬಹುತೇಕ ಪಕ್ಷಗಳು ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತವೆ. ಚುನಾವಣೆಯ ನಂತರ ಮೈತ್ರಿ ಮಾಡಿಕೊಳ್ಳಬಹುದು. ಸಾಧ್ಯವಾದರೆ ಚುನಾವಣೆಯ ನಂತರ ಬಿಎಸ್ಪಿ ತನ್ನ ಬೆಂಬಲವನ್ನು ನೀಡಬಹುದು. ನಮ್ಮ ಪಕ್ಷವು ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದಾರೆ.