ಬಿಹು ಸಂಭ್ರಮದಲ್ಲಿದ್ದ ಬಿಎಸ್‌ಎಫ್ ಯೋಧರು ಜಾನಪದ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಟ್ವಿಟರ್‌ನಲ್ಲಿರುವ ತನ್ನ ಹ್ಯಾಂಡಲ್ ಮೂಲಕ ಪೋಸ್ಟ್ ಮಾಡಿದೆ.
ತೀವ್ರ ಚಳಿಯ ನಡುವೆಯೂ ತಮ್ಮ ಎಂದಿನ ಸ್ಪೂರ್ತಿಯಲ್ಲೇ ಹೆಜ್ಜೆ ಹಾಕಿದ ಬಿಎಸ್‌ಎಫ್ ಯೋಧರನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ದೇಶಾದ್ಯಂತ ಸಂಭ್ರಮಿಸುವ ಸುಗ್ಗಿ ಸಿರಿಯನ್ನು ಈಶಾನ್ಯದಲ್ಲಿ ಬಿಹು ಎಂದು ಕರೆಯಲಾಗುತ್ತದೆ.
ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೆರನ್ ಸೆಕ್ಟರ್‌ನಲ್ಲಿ ಈ ವಿಡಿಯೋ ಶೂಟ್ ಮಾಡಲಾಗಿದ್ದು, -15 ಡಿಗ್ರಿ ಚಳಿಯಲ್ಲೂ ಸಹ ಯೋಧರು ಭಾರೀ ಲವಲವಿಕೆಯಿಂದ ಕುಣಿಯುತ್ತಿರುವುದನ್ನು ನೋಡಬಹುದಾಗಿದೆ.
“ಹಿಮಾಚ್ಛಾದಿತ ಪರ್ವತಗಳು, ಕಣ್ಣು ಕುರುಡಾಗಿಸುವ ಹಿಮಗಾಳಿಗಳು, ಮರಗಟ್ಟುವ ತಾಪಮಾನ, 24 ಗಂಟೆಗಳ ಕಾಲ ಕಣ್ಗಾವಲಿಟ್ಟು ಆದ ಆಯಾಸ, ಮನೆಗಳಿಂದ ದೂರವಿರುವುದು; ಇವ್ಯಾವುದೂ ಸಹ ಬಿಎಸ್‌ಎಫ್ ತುಕಡಿಗಳಿಗೆ ಒಂದೆರಡು ಹೆಜ್ಜೆ ಹಾಕಿ ಬಿಹು ಸಂಭ್ರಮದಲ್ಲಿ ಭಾಗಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ,” ಎಂದು ಪೋಸ್ಟ್‌ನಲ್ಲಿ ಕ್ಯಾಪ್ಷನ್ ಹಾಕಲಾಗಿದೆ.