ನವದೆಹಲಿ: ಗಡಿ ಭದ್ರತಾ ಪಡೆ(ಬಿಎಸ್ಎಫ್) ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇಕಡ 10 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಮೊದಲ ಬ್ಯಾಚ್ ಅಥವಾ ನಂತರದ ಬ್ಯಾಚ್ ಎಂಬ ಪರಿಗಣನೆಗಳ ಆಧಾರದಲ್ಲಿ ಗರಿಷ್ಠ ವಯೋಮಿತಿ ಸಡಿಲಿಕೆ ಮಾಡಲು ಕೂಡ ನಿರ್ಧರಿಸಲಾಗಿದೆ. ಕೇಂದ್ರ ಗೃಹ ಮಂತ್ರಾಲಯದಿಂದ ಗುರುವಾರ ಈ ಕುರಿತಾಗಿ ಅಧಿಸೂಚನೆ ಹೊರಡಿಸಲಾಗಿದೆ.
ನೇಮಕಾತಿ ಮತ್ತು ವಯೋಮಿತಿ ಸಡಿಲಿಕೆ ಸಂಬಂಧ ಬಿಎಸ್ಎಫ್ ನಿಯಮಗಳ ತಿದ್ದುಪಡಿಗೆ ಸರ್ಕಾರ ಮುಂದಾಗಿದೆ. ಬಿಎಸ್ಎಫ್ ನಲ್ಲಿ ಅಗ್ನಿವೀರರ ಕೋಟಾ ಸೃಷ್ಟಿಸಲಾಗಿದೆ. ಅಭ್ಯರ್ಥಿಗಳಿಗೆ ದೈಹಿಕ ಕ್ಷಮತೆ ಪರೀಕ್ಷೆಯಿಂದ ವಿನಾಯಿತಿ ಸಿಗಲಿದೆ. ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಮೊದಲ ಬ್ಯಾಚ್ ಮಾಜಿ ಅಗ್ನಿವೀರರಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ, ನಂತರದ ಎಲ್ಲಾ ಬ್ಯಾಚ್ ಗಳ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡುವುದಾಗಿ ಹೇಳಲಾಗಿದೆ.