
ಆನ್ಲೈನ್ನಲ್ಲಿ ತನ್ನ ಮಗಳ ಅಶ್ಲೀಲ ವಿಡಿಯೋ ಪ್ರಸಾರ ವಿರೋಧಿಸಿದ ಗಡಿ ಭದ್ರತಾ ಪಡೆ(ಬಿಎಸ್ಎಫ್) ಜವಾನನನ್ನು ಹೊಡೆದು ಕೊಂದ ಘಟನೆ ಗುಜರಾತ್ನ ನಾಡಿಯಾಡ್ ಜಿಲ್ಲೆಯಲ್ಲಿ ನಡೆದಿದೆ.
ಬಿಎಸ್ಎಫ್ ಯೋಧ ಮೆಲ್ಜಿಭಾಯಿ ವಘೇಲಾ ಅವರು 15 ವರ್ಷದ ಬಾಲಕನ ಮನೆಗೆ ಹೋಗಿ, ತನ್ನ ಮಗಳ ಆಕ್ಷೇಪಾರ್ಹ ವಿಡಿಯೋವನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಿದ ಬಗ್ಗೆ ಅವನ ಕುಟುಂಬಕ್ಕೆ ದೂರು ನೀಡಿದ್ದಾರೆ. ಈ ವೇಳೆ ಗಲಾಟೆಯಾಗಿ ಯೋಧನ ಹೊಡೆದು ಕೊಲ್ಲಲಾಗಿದೆ.
ವಘೇಲಾ ತನ್ನ ಮಗ ನವದೀಪ್ ಮತ್ತು ಅವನ ಹೆಂಡತಿಯೊಂದಿಗೆ ಅಲ್ಲಿಗೆ ಹೋಗಿದ್ದರು. ಆದರೆ, ಹುಡುಗನ ಕುಟುಂಬ ಸದಸ್ಯರು ಅವರನ್ನು ನಿಂದಿಸಲು ಪ್ರಾರಂಭಿಸಿದ್ದು, ಇದಕ್ಕೆ ವಘೇಲಾ ಆಕ್ಷೇಪ ವ್ಯಕ್ತಪಡಿಸಿದಾಗ ಆತನ ಮೇಲೆ ದೊಣ್ಣೆ ಹಾಗೂ ಹರಿತವಾದ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಅವರ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ.
ಬಿಎಸ್ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪುತ್ರನ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.