alex Certify BSF ಯೋಧನ ಪತ್ನಿ – ಮಗಳ ಧೈರ್ಯಕ್ಕೆ ಬೆಚ್ಚಿಬಿದ್ದ ಕಳ್ಳರು; ವೈರಲ್‌ ಆಗಿದೆ ಈ ಘಟನೆಯ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSF ಯೋಧನ ಪತ್ನಿ – ಮಗಳ ಧೈರ್ಯಕ್ಕೆ ಬೆಚ್ಚಿಬಿದ್ದ ಕಳ್ಳರು; ವೈರಲ್‌ ಆಗಿದೆ ಈ ಘಟನೆಯ ವಿಡಿಯೋ

ಗಡಿ ಭದ್ರತಾ ಪಡೆ ಯೋಧರ ಶೌರ್ಯ-ಧೈರ್ಯದ ಕುರಿತು ಎಲ್ಲರೂ ಅರಿತಿದ್ದಾರೆ. ಆದರೆ ಬಿಎಸ್‌ಎಫ್ ಯೋಧರು ಮಾತ್ರವಲ್ಲ ಅವರ ಕುಟುಂಬಸ್ಥರೂ ಸಾಹಸಿಗಳು ಎಂಬುದು ಈ ಘಟನೆಯಿಂದ ಸಾಬೀತಾಗುತ್ತೆ. ಅಂದ ಹಾಗೆ ಇಂತದೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶದ ಆಗ್ರಾದಲ್ಲಿ.

ಆಗ್ರಾದ ವಾಯು ವಿಹಾರ್ (ಶಹಗಂಜ್) ನಲ್ಲಿರುವ ಬ್ರಿಜ್ ವಿಹಾರ್ ಕಾಲೋನಿಯಲ್ಲಿ ಬಿಎಸ್‌ಎಫ್ ಯೋಧ ಊರ್ವೇಶ್‌ ಕುಮಾರ್‌ ಅವರ ನಿವಾಸವಿದೆ. ಸದ್ಯ ಅವರು ಬಿಕಾನೇರ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆಗ್ರಾದ ಮನೆಯಲ್ಲಿ  ಪತ್ನಿ ರೇಖಾ, ತನ್ನ ಪುತ್ರಿಯರಾದ ಅವನಿ (07) ಮತ್ತು ಶ್ರಾವ್ಯ (03) ಹಾಗೂ ತಮ್ಮ ಅತ್ತೆ – ಮಾವನೊಂದಿಗೆ ವಾಸಿಸುತ್ತಿದ್ದಾರೆ.

ಮಂಗಳವಾರ ಅತ್ತೆ – ಮಾವ ಕೆಲಸದ ನಿಮಿತ್ತ ಕಸ್ಗಂಜ್‌ ಗೆ ತೆರಳಿದ್ದು, ರೇಖಾ ತಮ್ಮ ಪುತ್ರಿ ಅವನಿಯ ಶಾಲೆ ಮೊದಲ ದಿನವಾದ ಕಾರಣ ಸ್ಕೂಟರ್‌ ನಲ್ಲಿ ಬಿಡಲು ಹೋಗಿದ್ದಾರೆ. ಜೊತೆಗೆ ತಮ್ಮ ಮತ್ತೊಬ್ಬ ಪುತ್ರಿ ಶ್ರಾವ್ಯಳನ್ನೂ ಕರೆದುಕೊಂಡು ಹೋಗಿದ್ದಾರೆ.

ಅವನಿಯನ್ನು ಬಿಟ್ಟು ಬರುವಾಗ ಎಟಿಎಂ ಒಂದಕ್ಕೆ ಹೋದ ಅವರು 5 ಸಾವಿರ ರೂಪಾಯಿಗಳನ್ನು ಡ್ರಾ ಮಾಡಿದ್ದಾರೆ. ಬಹುಶಃ ದುಷ್ಕರ್ಮಿಗಳು ಇದನ್ನು ಗಮನಿಸಿದ್ದರೆಂದು ಕಾಣಿಸುತ್ತೆ. ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದಾರೆ.

ರೇಖಾ ಅವರ ಮಗಳು ಶ್ರಾವ್ಯ ಮೊದಲು ಮನೆ ಒಳಗೆ ಹೋಗಿದ್ದಾಳೆ. ರೇಖಾ ಸಹ ತಮ್ಮ ಸ್ಕೂಟರ್‌ ನಿಲ್ಲಿಸಲು ಬರುತ್ತಿದ್ದಂತೆಯೇ ಹಿಂಬದಿಯಿಂದ ಬಂದ ಯುವಕನೊಬ್ಬ ಅವರ ಬಳಿಯಿದ್ದ ಬ್ಯಾಗ್‌ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ ಇದಕ್ಕೆ ಪ್ರತಿರೋಧ ಒಡ್ಡಿದ ರೇಖಾ ಆತನಿಗೆ ಥಳಿಸಿದ್ದಾರೆ.

ಅಷ್ಟರಲ್ಲೇ ಪಿಸ್ತೂಲು ಹಿಡಿದು ಬಂದ ಯುವಕನೊಬ್ಬ ರೇಖಾ ಅವರಿಗೆ ಬೆದರಿಸಿದ್ದಾನೆ. ಇಷ್ಟಾದರೂ ಎದೆಗುಂದದ ಅವರು ತಮ್ಮ ಹೋರಾಟ ಮುಂದುವರೆಸಿದ್ದಾರೆ. ಅಷ್ಟರಲ್ಲೇ ಪರಿಸ್ಥಿತಿಯನ್ನು ಅರಿತ ರೇಖಾ ಅವರ ಮಗಳು ಶ್ರಾವ್ಯ ಸಹಾಯ ಯಾಚಿಸಿ ಕೂಗಿಕೊಂಡು ಹೊರ ಓಡಿದ್ದಾಳೆ.

ಆಗ ಅಪಾಯದ ಅರಿವಾದ ಯುವಕರು ತಮಗಾಗಿ ಕಾದಿದ್ದ ಮತ್ತೊಬ್ಬನೊಂದಿಗೆ ಬೈಕ್‌ ನಲ್ಲಿ ಪರಾರಿಯಾಗಿದ್ಸಾರೆ. ಅದಕ್ಕೂ ಮುನ್ನ ಪರ್ಸ್‌ ಕಸಿದುಕೊಂಡು ಹೋಗಿದ್ದು, ಅದರಲ್ಲಿ ಬೆಲೆಬಾಳುವ ದಾಖಲೆಗಳಿದ್ದವು ಎನ್ನಲಾಗಿದೆ.

ಈ ಎಲ್ಲ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಬಿಎಸ್‌ಎಫ್‌ ಯೋಧ ಊರ್ವೇಶ್‌ ಕುಮಾರ್‌ ಪತ್ನಿ ರೇಖಾರ ಸಾಹಸ ಮತ್ತು ಮಗಳು ಶ್ರಾವ್ಯಳ ಸಮಯಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...