ಷೇರು ಮಾರುಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ. ಆದ್ರೆ ಷೇರು ಮಾರುಕಟ್ಟೆ ಕೂಡ ಕೆಲವೊಂದು ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿದೆ.
ಹಲವಾರು ವರ್ಷಗಳಿಂದ ಮುಂಬೈ ಷೇರು ಮಾರುಕಟ್ಟೆ ದೀಪಾವಳಿ ಸಂದರ್ಭದಲ್ಲಿ ತನ್ನದೇ ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿದೆ. ದೀಪಾವಳಿಯಂದು ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ಆದ್ರೆ ಮುಹೂರ್ತದ ವಹಿವಾಟು ನಡೆಯುತ್ತದೆ. ಈ ಮುಹೂರ್ತದ ವಹಿವಾಟು ಹೆಚ್ಚು ಮಹತ್ವ ಪಡೆದಿದೆ.
ಷೇರು ಮಾರುಕಟ್ಟೆಯಲ್ಲಿ ಕೇವಲ 1 ಗಂಟೆ ಮಾತ್ರ ದೀಪಾವಳಿ ದಿನ ವ್ಯಾಪಾರ ನಡೆಯುತ್ತದೆ. ಈ ಒಂದು ಗಂಟೆಯಲ್ಲಿ, ಹೂಡಿಕೆದಾರರು, ಸಣ್ಣ ಹೂಡಿಕೆಯನ್ನು ಮಾಡುವ ಮೂಲಕ ಮಾರುಕಟ್ಟೆಯ ಸಂಪ್ರದಾಯವನ್ನು ಅನುಸರಿಸುತ್ತಾರೆ.
ಈ ವರ್ಷ ನವೆಂಬರ್ 1 ರಂದು ದೀಪಾವಳಿ ಆಚರಣೆ ಮಾಡಲಾಗ್ತಿದೆ. ಮುಹೂರ್ತದ ವಹಿವಾಟಿನ ಸಮಯ ನಿಗದಿಯಾಗಿದೆ. ನವೆಂಬರ್ 1, 2024 ರಂದು ಸ್ಟಾಕ್ ಮಾರ್ಕೆಟ್ ಮತ್ತು ಎನ್ಎಸ್ಇ, ಸಂಜೆ 6 ಗಂಟೆಯಿಂದ 7-10 ರ ವರೆಗೆ ವಿಶೇಷ ಮುಹೂರ್ತ ವ್ಯಾಪಾರ ನಡೆಸಲಿದೆ.
ಮುಹೂರ್ತ ವ್ಯಾಪಾರ ಎಂದರೇನು ?
ಭಾರತೀಯ ಸಂಪ್ರದಾಯದ ಪ್ರಕಾರ, ದೀಪಾವಳಿ ದೇಶದ ಹಲವು ಭಾಗಗಳಲ್ಲಿ ಹೊಸ ಹಣಕಾಸು ವರ್ಷದ ಆರಂಭವನ್ನು ಸೂಚಿಸುತ್ತದೆ. ಈ ಶುಭ ಸಮಯದಲ್ಲಿ, ಷೇರು ಮಾರುಕಟ್ಟೆಯ ವ್ಯಾಪಾರಿಗಳು ವಿಶೇಷ ಷೇರು ವ್ಯಾಪಾರವನ್ನು ಮಾಡುತ್ತಾರೆ.
ಅದಕ್ಕಾಗಿಯೇ ಇದನ್ನು ʼಮುಹೂರ್ತ ಟ್ರೇಡಿಂಗ್ʼ ಎಂದೂ ಕರೆಯುತ್ತಾರೆ. ಮುಹೂರ್ತದ ವಹಿವಾಟಿನ ದಿನದಂದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಶ್ರೀಮಂತರು ಈ ದಿನದಂದು ಹೂಡಿಕೆ ಮಾಡುವುದು ಹೆಚ್ಚು. ಸಣ್ಣ ಹೂಡಿಕೆಯ ಮೇಲೆ ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ.
ದೀಪಾವಳಿಯಂದು ವಿಶೇಷ ಮುಹೂರ್ತದಲ್ಲಿ ವ್ಯಾಪಾರ ಆರಂಭಿಸುವ ಮೂಲಕ ಹೂಡಿಕೆದಾರರು ಉತ್ತಮ ಆರ್ಥಿಕ ವರ್ಷವನ್ನು ಆರಂಭಿಸುತ್ತಾರೆ. ಮುಹೂರ್ತದ ವ್ಯಾಪಾರವು ಸಂಪೂರ್ಣವಾಗಿ ನಂಬಿಕೆ ಮೇಲೆ ನಿಂತಿದೆ. ಈ ದಿನ ಹೆಚ್ಚಿನ ಜನರು ಷೇರುಗಳನ್ನು ಖರೀದಿಸುತ್ತಾರೆ. ಆದ್ರೆ ಯಾರೂ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವುದಿಲ್ಲ. ಸಣ್ಣ ಮಟ್ಟದಲ್ಲಿ ಹೂಡಿಕೆ ಮಾಡಿ, ಹಣ ಗಳಿಸುತ್ತಾರೆ.