ರಾಜಕೀಯ ಅನ್ನೋದು ಚದುರಂಗ ಆಟವಿದ್ದಂತೆ. ಇದು ಅಧಿಕಾರದಲ್ಲಿದ್ದವರು ನಾಳೆ ಮೂಲೆಗುಂಪಾಗಬಹುದು. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಾರೆ ಎಂಬ ವದಂತಿ ಕೇಳಿದ ಬಳಿಕ ವಲಸಿಗ ಶಾಸಕರಲ್ಲೂ ಇದೇ ಭಯ ಹುಟ್ಟಿಕೊಂಡಿದೆ. ಸಮ್ಮಿಶ್ರ ಸರ್ಕಾರವನ್ನ ಪತನ ಮಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವಲಸಿಗ ಶಾಸಕರು ಯಡಿಯೂರಪ್ಪ ರಾಜೀನಾಮೆ ನೀಡಿದ್ರೆ ತಮ್ಮ ಭವಿಷ್ಯ ಏನಾಗಬಹುದೆಂದು ತಲೆಕೆಡಿಸಿಕೊಳ್ತಿದ್ದಾರೆ ಎನ್ನಲಾಗಿದೆ.
2019ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಪತನ ಮಾಡಿ ಬಿಜೆಪಿ ಅಧಿಕಾರ ತರಲು ಈ 17 ವಲಸಿಗ ಶಾಸಕರು ದೊಡ್ಡ ಹೈಡ್ರಾಮಾವನ್ನೇ ಮಾಡಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದ ಯಡಿಯೂರಪ್ಪ 17 ಶಾಸಕರಲ್ಲಿ 12 ಮಂದಿಗೆ ತಮ್ಮ ಸಂಪುಟದಲ್ಲಿ ಸ್ಥಾನವನ್ನೂ ನೀಡಿದ್ದರು.
ಆದರೆ ಇದೀಗ ಯಡಿಯೂರಪ್ಪರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಿರೋದ್ರಿಂದ ಇವರುಗಳಿಗೆ ತಮ್ಮ ಭವಿಷ್ಯ ಏನಾಗಬಹುದು ಎಂಬ ಭಯ ಶುರುವಾಗಿದೆ. ಪಕ್ಷದ ನಿಷ್ಟಾವಂತರಿಗೆ ಒಳ್ಳೆಯ ಖಾತೆಗಳನ್ನ ನೀಡಿ ನಮಗೆ ಉಳಿದ ಖಾತೆ ನೀಡಬಹುದು ಎಂಬ ಗೊಂದಲ ಒಂದೆಡೆಯಾದರೆ ಸಚಿವ ಸ್ಥಾನವೇ ಕೈ ತಪ್ಪಿ ಹೋದರೆ ಮುಂದೆ ಕತೆ ಏನು ಎಂಬ ಭಯ ಕೂಡ ಇವರಲ್ಲಿದೆ. ಯಾರೇ ಸಿಎಂ ಆದರೂ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ನಾವು ಪಟ್ಟ ಕಷ್ಟವನ್ನ ವರಿಷ್ಠರು ಮರೆಯುವಂತಿಲ್ಲ ಅನ್ನೋದು ವಲಸಿಗ ಶಾಸಕರ ಕೂಗಾಗಿದೆ.