ರಾಜ್ಯದಲ್ಲಿ ಪ್ರಸ್ತುತ ನಾಯಕತ್ವ ಬದಲಾವಣೆ ಚರ್ಚೆಯೇ ಜೋರಾಗಿದೆ. ರಾಜ್ಯದ ಸಿಎಂ ಆಗಿ ಯಡಿಯೂರಪ್ಪ ಮುಂದುವರಿಯುವುದು ಬಹುತೇಕ ಡೌಟ್ ಎನ್ನಲಾಗ್ತಿದೆ.
ಈ ವದಂತಿಗೆ ಪೂರಕವಾಗುವಂತಹ ಎಲ್ಲಾ ಸುಳಿವುಗಳನ್ನ ಸ್ವತಃ ಸಿಎಂ ಯಡಿಯೂರಪ್ಪರೇ ನೀಡ್ತಿದ್ದಾರೆ.
ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾಗಿ ಬಂದ ಬಳಿಕ ಯಡಿಯೂರಪ್ಪ ಮಾಡಿದ ಟ್ವೀಟ್ಗಳು, ಅವರ ಹೇಳಿಕೆಗಳು ಇವೆಲ್ಲವೂ ಕೂಡ ರಾಜ್ಯದಲ್ಲಿ ಸಿಎಂ ಆಗಿ ಯಡಿಯೂರಪ್ಪ ಅವಧಿ ಮುಗೀತಾ ಅನ್ನೋ ಮಾತಿಗೆ ಪುಷ್ಠಿ ನೀಡುವಂತಿದೆ.
ಪಕ್ಷದ ಕಾರ್ಯಕರ್ತರ ಪಾಲಿಗೆ ರಾಜಾಹುಲಿ ಎನಿಸಿರುವ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಮಾತನ್ನ ಯಾರೂ ಕೂಡ ತಳ್ಳಿಹಾಕುವಂತೆಯೇ ಇಲ್ಲ. ಕರ್ನಾಟಕದ ಇತಿಹಾಸದಲ್ಲಿಯೇ ನಾಲ್ಕು ಬಾರಿ ಸಿಎಂ ಆಗಿರುವ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರದು. ಅದರಂತೆಯೇ ಹಿಂದಿನ ಮೂರು ಬಾರಿಯೂ ಅವರು ತಮ್ಮ ಅಧಿಕಾರಾವಧಿಯನ್ನ ಪೂರ್ಣಗೊಳಿಸಿಲ್ಲ ಎಂಬ ಮಾತು ಕೂಡ ಅಷ್ಟೇ ಸತ್ಯ. ಈ ಬಾರಿ ಕೂಡ ಇದೇ ಮಾತು ನಿಜವಾಗುತ್ತಾ ಎಂಬ ಗುಮಾನಿ ಬಲವಾಗ್ತಿದೆ.
ಅಲ್ಲದೇ ಯಡಿಯೂರಪ್ಪ ಈ ಹಿಂದಿನ ಸಿಎಂ ಆಡಳಿತದ ಅವಧಿಯನ್ನ ಒಮ್ಮೆ ಅವಲೋಕನ ಮಾಡಿ ನೋಡಿದಾಗ ಅವರಿಗೆ ಆಷಾಡ ಮಾಸದ ಕಂಟಕ ಕಾದಿದ್ಯಾ ಎಂಬ ವಿಚಾರ ಕೂಡ ಮನಸ್ಸಿಗೆ ಬಾರದೇ ಇರದು. ಈ ಹಿಂದೆ ಅಂದರೆ 2011ರಲ್ಲಿ ಯಡಿಯೂರಪ್ಪ ರಾಜ್ಯದ ಸಿಎಂ ಆಗಿದ್ದ ಅವಧಿಯಲ್ಲಿಯೂ ಅವರಿಗೆ ಹೈಕಮಾಂಡ್ನಿಂದ ರಾಜೀನಾಮೆಗೆ ಒತ್ತಡ ಹೇರಲಾಗಿತ್ತು. ಲೋಕಾಯುಕ್ತ ವರದಿ ಸಲ್ಲಿಕೆ ಬೆನ್ನಲ್ಲೇ ರಾಜೀನಾಮೆ ನೀಡುವಂತೆ ಜುಲೈ 28ರಂದು ಹೈಕಮಾಂಡ್ ಸೂಚನೆ ನೀಡಿತ್ತು. ಈ ವೇಳೆ ಆಷಾಢ ಮುಗಿದ ಮೇಲೆ ರಾಜೀನಾಮೆ ನೀಡುವೆ ಎಂದಿದ್ದ ಯಡಿಯೂರಪ್ಪ ತಮ್ಮ ಮಾತಿನಂತೆಯೇ 2011ರ ಜುಲೈ 31ರಂದು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು.
ಈಗಲೂ ಸಹ ಆಷಾಡ ಮಾಸವೇ ನಡೆಯುತ್ತಿದೆ. ವಿಪರ್ಯಾಸ ಎಂಬಂತೆ 2011ರಂತೆ ಈಗಲೂ ಕೂಡ ಯಡಿಯೂರಪ್ಪ ಸಿಎಂ ಗಾದಿ ಅಲುಗಾಡುತ್ತಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ರಾಜೀನಾಮೆ ಎಂದು ಯಡಿಯೂರಪ್ಪ ಮುಂದೆ ಸಮರ್ಥನೆ ನೀಡಿದರೂ ಸಹ ಇದು ಪಕ್ಷದ ಕೆಲ ನಾಯಕರೇ ಸೇರಿ ಮಾಡಿರುವ ಪಿತೂರಿ ಅನ್ನೋದು ಕಣ್ಣ ಮುಂದೆ ಇರುವ ಸತ್ಯವಾಗಿದೆ.
ಅದೇನೆ ಇರ್ಲಿ ಕಳೆದ ಬಾರಿಯಂತೆಯೇ ಈ ಬಾರಿಯೂ ಕೂಡ ಯಡಿಯೂರಪ್ಪ ಆಷಾಡ ಮಾಸ ಮುಗಿಯೋದನ್ನೇ ಕಾಯ್ತಿದ್ದಾರಾ ಅಥವಾ ಆಷಾಡ ಮಾಸದಲ್ಲೇ ಸಿಎಂ ಪದವಿಯನ್ನ ಬಿಟ್ಟುಕೊಡ್ತಾರಾ ಅನ್ನೋದು ಸದ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.