ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಹಗೆತನ ತೋರಿಸುತ್ತಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಎನ್. ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಇದೊಂದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ಹಗೆತನದ ರಾಜಕೀಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಯಡಿಯೂರಪ್ಪ ವಿಚಾರದಲ್ಲಿ ರಾಜ್ಯ ಸರ್ಕಾರ ಹಗೆತನದ ರಾಜಕೀಯ ಮಾಡುತ್ತಿದೆ. ಈ ರೀತಿ ಮಾಡುತ್ತಿಲ್ಲವೆಂದು ಮುಖ್ಯಮಂತ್ರಿಗಳೇ ಹೇಳಬೇಕು. ಪ್ರಕರಣದಲ್ಲಿ ಹುರುಳಿಲ್ಲ ಎಂದು ಈ ಹಿಂದೆಯೇ ಗೃಹ ಸಚಿವರು ಹೇಳಿದ್ದರು. ರಾಹುಲ್ ಗಾಂಧಿ ಬೆಂಗಳೂರು ಕೋರ್ಟ್ ಗೆ ಬರುವಂತಾದ ಕಾರಣ ಬಿಜೆಪಿಯವರನ್ನು ನ್ಯಾಯಾಲಯಕ್ಕೆ ತಂದು ನಿಲ್ಲಿಸಬೇಕೆಂಬದು ಕಾಂಗ್ರೆಸ್ ನ ದುರುದ್ದೇಶ ಜಗಜ್ಜಾಹಿರಾಗಿದೆ ಎಂದು ಟೀಕಿಸಿದ್ದಾರೆ.’
ಪ್ರಕರಣ ಸಂಬಂಧಪಟ್ಟ ಬಿ ರಿಪೋರ್ಟ್ ಸಲ್ಲಿಕೆಯಾಗುವ ನಿರೀಕ್ಷೆಯಿತ್ತು. ಎರಡು ಮೂರು ದಿನಗಳಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು, ರಣದೀಪ್ ಸಿಂಗ್ ಸುರ್ಜೇವಾಲಾ ಆದೇಶದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಸೇರಿಕೊಂಡು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಏನೂ ಪುರಾವೆ ಇಲ್ಲದ ಪ್ರಕರಣದಲ್ಲಿ ಈ ರೀತಿಯ ಬೆಳವಣಿಗೆಯಾಗಿರುವುದು ಆಶ್ಚರ್ಯ ತಂದಿದೆ. ಬಿ ರಿಪೋರ್ಟ್ ಹಾಕಬಹುದಾದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ರಾಜಕಾರಣ ಮಾಡಲಾಗುತ್ತಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದ್ದಾರೆ.