ಶಿವಮೊಗ್ಗ: ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷದ ಫಲಾನುಭವಿಗಳಿಗೆ ಯಾವುದೇ ನೆಪ ಹೇಳದೆ ಹಣ ಕೊಡಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.
ರಾಜ್ಯದ ಬಡ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗುವ ಉದ್ದೇಶದಿಂದ ಮೊದಲ ಬಾರಿಗೆ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೆ. ಅದರ ಅನುಷ್ಠಾನದ ವಿಚಾರದಲ್ಲಿ ಈಗ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಟೀಕಿಸಿದ್ದಾರೆ.
ತಂದೆ, ತಾಯಿ ಇಬ್ಬರೂ ಮೃತಪಟ್ಟ ಕುಟುಂಬದ ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಮಾನವೀಯತೆ ಎಂದು ಪರಿಗಣಿಸಿ ಫಲಾನುಭವಿಗಳಿಗೆ ಮೊದಲು ಹಣ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್ ಪಡೆದ ಫಲಾನುಭವಿಗಳಿಗೆ 18 ವರ್ಷ ತುಂಬಿದರೂ ಅವರ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂಪಾಯಿ ಜಮಾ ಆಗಿಲ್ಲ. ರಾಜ್ಯದಲ್ಲಿ 34.50 ಲಕ್ಷ ಭಾಗ್ಯಲಕ್ಷ್ಮಿ ಪಲಾನುಭವಿಗಳಿದ್ದಾರೆ. ಉನ್ನತ ಶಿಕ್ಷಣ ಸೇರಿದಂತೆ ಹೆಣ್ಣು ಮಕ್ಕಳ ಇತರೆ ಕಾರ್ಯಗಳಿಗೆ ಆ ಹಣದಿಂದ ಅನುಕೂಲವಾಗುತ್ತದೆ. ಹೀಗಾಗಿ ಕೂಡಲೇ ಭಾಗ್ಯಲಕ್ಷ್ಮಿ ಬಾಂಡ್ ಹಣ ಕೊಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.