ಹೈದರಾಬಾದ್: ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಸಂಸದ ಪ್ರಭಾಕರ್ ರೆಡ್ಡಿ ಅವರು ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಚಾಕುವಿನಿಂದ ಇರಿಯಲಾಗಿದೆ.
ಸಂಸದರ ಹೊಟ್ಟೆಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇದಕ್ ಲೋಕಸಭಾ ಕ್ಷೇತ್ರದ ಬಿಆರ್‌ಎಸ್ ಸಂಸದ ರೆಡ್ಡಿ ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ದುಬ್ಬಾಕ್ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಸಿದ್ದಿಪೇಟ್ ಜಿಲ್ಲೆಯ ದೌಲ್ತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ರೆಡ್ಡಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅವರನ್ನು ಗಜ್ವೆಲ್ ಏರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಉತ್ತಮ ಚಿಕಿತ್ಸೆಗಾಗಿ ಸಿಕಂದರಾಬಾದ್‌ನ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಸುರಕ್ಷಿತವಾಗಿದ್ದಾರೆ. ದೌಲತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅವರನ್ನು ಗಜ್ವೇಲ್‌ಗೆ ಸ್ಥಳಾಂತರಿಸಲಾಗಿದೆ. ಆರೋಪಿ ಬಂಧಿತನಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸಿದ್ದಿಪೇಟೆ ಆಯುಕ್ತರಾದ ಎನ್. ಶ್ವೇತಾ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ಭಾಗವಾಗಿ, ಬಿಆರ್‌ಎಸ್ ಸಂಸದರು ಬೆಳಿಗ್ಗೆ ಸೂರಂಪಲ್ಲಿ ಗ್ರಾಮದಲ್ಲಿ ಪಾದ್ರಿಯ ಕುಟುಂಬವನ್ನು ಭೇಟಿ ಮಾಡಿದರು. ಪಾದ್ರಿಯ ಮನೆಯಿಂದ ಹೊರ ಬಂದ ಬಳಿಕ ಬಿಆರ್‌ಎಸ್ ಕಾರ್ಯಕರ್ತನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬರು ಸಂಸದರಿಗೆ ಕೈಕುಲುಕಿದಂತೆ ನಟಿಸಿ ಜೇಬಿನಲ್ಲಿದ್ದ ಚಾಕು ತೆಗೆದು ರೆಡ್ಡಿ ಹೊಟ್ಟೆಗೆ ಇರಿದಿದ್ದಾನೆ.
ಬಿಆರ್‌ಎಸ್ ಕಾರ್ಯಕರ್ತರು ಕೂಡಲೇ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ದುಬ್ಬಾಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚೇಪ್ಯಾಲ್ ಗ್ರಾಮದ ದತ್ತಾಣಿ ರಾಜು ಎಂದು ಗುರುತಿಸಲಾಗಿದೆ. ರಾಜು ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿರುವ ಆರೋಪಿ ಬಿಜೆಪಿ ಪರ ಸಹಾನುಭೂತಿ ಹೊಂದಿರುವ ವ್ಯಕ್ತಿಯಾಗಿದ್ದು, ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.