
ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್ ರೈಸ್ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ, ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಬ್ರೌನ್ ರೈಸ್ ಅನ್ನು ಪಾಲಿಶ್ ಮಾಡುವುದಿಲ್ಲ. ಭತ್ತದ ಹೊರಭಾಗವನ್ನು ಮಾತ್ರ ತೆಗೆದಿರುತ್ತಾರೆ. ಈ ಅಕ್ಕಿ ಕಂದು ಬಣ್ಣದಲ್ಲಿರುವುದರಿಂದ ಬ್ರೌನ್ ರೈಸ್ ಎಂದು ಕರೆಯಲಾಗುತ್ತದೆ. ಕಂದು ಬಣ್ಣದ ಈ ಹೊಟ್ಟನ್ನೂ ತೆಗೆದರೆ ಅಕ್ಕಿ ಸಂಪೂರ್ಣ ಬೆಳ್ಳಗಾಗುತ್ತದೆ.
ಆದ್ರೆ ಆ ರೀತಿ ಪಾಲಿಶ್ ಮಾಡಿ ಬಿಳಿ ಅಕ್ಕಿಯನ್ನು ಸೇವಿಸುವುದಕ್ಕಿಂತ ಬ್ರೌನ್ ರೈಸ್ ಸೇವನೆ ಉತ್ತಮ. ಬಿಳಿ ಅಕ್ಕಿಗಿಂತ ಇದು ಕಡಿಮೆ ಸಂಸ್ಕರಿಸಲ್ಪಟ್ಟಿರುವುದರಿಂದ ಇದರಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ.
ಬ್ರೌನ್ ರೈಸ್‌ನಲ್ಲಿರೋ ಪೌಷ್ಠಿಕಾಂಶಗಳು ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇದರಲ್ಲಿ ಕಂಡುಬರುವ ಫೈಬರ್ ಅಂಶ ಹೃದಯಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದ ಲಿಗ್ನಾನ್ ಅನ್ನು ಹೊಂದಿರುತ್ತದೆ, ಇದು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಬ್ರೌನ್ ರೈಸ್ ಸೇವನೆಯಿಂದ ತೂಕವನ್ನು ಕಡಿಮೆ ಮಾಡಬಹುದು. ಸಂಸ್ಕರಿಸಿದ ಬಿಳಿ ಅಕ್ಕಿಯಲ್ಲಿ ಫೈಬರ್ ಕಡಿಮೆ ಇರುತ್ತದೆ, ದೇಹಕ್ಕೆ ಬೇಕಾದ ಪೌಷ್ಠಿಕಾಂಶಗಳು ಸಿಗುವುದಿಲ್ಲ. ಆದ್ರೆ ಬ್ರೌನ್ ರೈಸ್ ಸೇವಿಸಿದರೆ ಅದರಲ್ಲಿ ಬಹಳಷ್ಟು ಫೈಬರ್ ಮತ್ತು ಪೋಷಕಾಂಶಗಳು ಕಂಡುಬರುತ್ತವೆ. ಇದು ತೂಕವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.