ಸೂರತ್: ಗುಜರಾತ್ ನ ಸೂರತ್ ನಲ್ಲಿ ವೇಶ್ಯಾವಾಟಿಕೆಗಾಗಿ ಬಾಂಗ್ಲಾದೇಶದಿಂದ ಕರೆದುಕೊಂಡು ಬಂದಿದ್ದ 17 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
ಮಾನವಕಳ್ಳಸಾಗಣೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರುದ್ಯೋಗಿ ದಂಪತಿ ಹಣ ಸಂಪಾದಿಸಲು ಬಾಲಕಿಯನ್ನು ಕರೆತಂದು ವೇಶ್ಯಾವಾಟಿಕೆಗೆ ತಳ್ಳಲು ಯೋಚಿಸಿದ್ದರು.
ಕಮ್ರೇಜ್ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದ ಮೂವರನ್ನು ಬಂಧಿಸಲಾಗಿದೆ. ಮಿಜಾನೂರ್ ಅಲಿಯಾಸ್ ಶರೀಫುಲ್ ಶೈಲ್ಕ್(36), ಅವರ ಪತ್ನಿ ಅಜ್ಮಿರಾ ಖಾತುನ್(32) ಮತ್ತು ಏಜೆಂಟ್ ಮುರ್ತುಜಾ ಶೇಖ್(31) ಎಂದು ಗುರುತಿಸಲಾಗಿದೆ. ಮಿಜಾನೂರ್ ಮತ್ತು ಆತನ ಪತ್ನಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದು, ಸೂರತ್ ಜಿಲ್ಲೆಯ ಖೋಲ್ವಾಡ್ ಗ್ರಾಮದಲ್ಲಿ ವಾಸಿಸುತ್ತಿರುವುದಾಗಿ ಗೊತ್ತಾಗಿದೆ.
ಆದಾಯ ಮೂಲವಿಲ್ಲದ ಅವರು ತಮ್ಮ ತಾಯ್ನಾಡಿನಿಂದ ಹುಡುಗಿಯನ್ನು ಕರೆದುಕೊಂಡು ಬಂದು ಮಾಂಸವ್ಯಾಪಾರ ನಡೆಸಲು ಮುಂದಾಗಿದ್ದರು. ವೇಶ್ಯಾವಾಟಿಕೆ ಉದ್ದೇಶಕ್ಕಾಗಿ ಬಾಲಕಿಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತರಲು ಅಂಕಲೇಶ್ವರ ನಿವಾಸಿ ಮುರ್ತುಜಾ ಶೇಖ್ ಸಂಪರ್ಕಿಸಿದ್ದಾರೆ. 15,000 ರೂ.ಗೆ ಹುಡುಗಿ ಕರೆತಂದಿದ್ದಾರೆ. ಹುಡುಗಿಯನ್ನು ಭಾರತದೊಳಗೆ ಪ್ರವೇಶಿಸಲು ವ್ಯವಸ್ಥೆ ಮಾಡಿದ ಏಜೆಂಟರಿಗೆ 4000 ರೂ. ಕೊಟ್ಟಿದ್ದಾರೆ.
ವಿಶೇಷ ಕಾರ್ಯಾಚರಣೆ ತಂಡ ಸುಳಿವು ಪಡೆದು ದಾಳಿ ಮಾಡಿದೆ. ಈ ಗುಂಪು ಇನ್ನೂ ಹಲವು ಹುಡುಗಿಯರನ್ನು ಕರೆತಂದು ಮಾಂಸ ವ್ಯಾಪಾರಕ್ಕೆ ಒತ್ತಾಯಿಸಿದ್ದ ಬಗ್ಗೆ ಮಾಹಿತಿ ಇದ್ದು, ತನಿಖೆ ನಡೆಸಲಾಗಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಅಜಯ್ ತೋಮರ್ ತಿಳಿಸಿದ್ದಾರೆ.