ಸಾಮಾನ್ಯವಾಗಿ ಕಬ್ಬು 12 ಅಡಿ ಎತ್ತರ ಬೆಳೆಯುತ್ತದಲ್ಲದೇ 2 ಕೆ.ಜಿ ತೂಕ ಇರುತ್ತದೆ. ಆದರೆ ವಿಜಯಪುರ ಜಿಲ್ಲೆ, ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ನಿವೃತ್ತ ಸೈನಿಕ ನಾರಾಯಣ ಸಾಳುಂಕಿ ಹಾಗೂ ಅವರ ಸಹೋದರ ಸಿದ್ದುಬಾ ಸಾಳುಂಕಿ ಬರೋಬ್ಬರಿ 25 ಅಡಿ ಎತ್ತರದ ಕಬ್ಬು ಬೆಳೆದಿದ್ದು, ಇದರ ತೂಕ 3 ರಿಂದ 4.7 ಕೆಜಿವರೆಗೆ ತೂಗುತ್ತಿದೆ.
ಇಸ್ರೇಲ್ ತಂತ್ರಜ್ಞಾನ ಬಳಸಿ ಈ ಸಹೋದರರು ತಮ್ಮ 5 ಎಕರೆ ಗದ್ದೆಯಲ್ಲಿ 686 ಟನ್ ಕಬ್ಬು ಬೆಳೆದಿದ್ದು, ಇದನ್ನು ನೋಡಲು ಮಂಗಳವಾರದಂದು ಉತ್ತರ ಪ್ರದೇಶದ ರೈತರಾದ ರವೀಂದರ್ ಸಿಂಗ್, ಮಹಾರಾಜ ಸಿಂಗ್, ಮುನೇಂದ್ರ ಸಿಂಗ್, ಮುಖೇಶ್ ಸಿಂಗ್ ಹಾಗೂ ಅಮ್ರೋಹಾ ಎಂಬವರು ಗ್ರಾಮಕ್ಕೆ ಭೇಟಿ ನೀಡಿದ್ದರು.
ಈ ತಳಿಯ ಕಬ್ಬಿನ ಬೆಳೆ ಕುರಿತು ಸಾಳುಂಕಿ ಸಹೋದರರಿಂದ ಮಾಹಿತಿ ಕಲೆ ಹಾಕಿದ ಅವರು, ತಮ್ಮ ಊರಿನಲ್ಲೂ ಇದನ್ನು ಬೆಳೆಯುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸಾಡುಂಕಿ ಸಹೋದರರು ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲು ವಿಜ್ಞಾನಿಗಳಾದ ಸಂಜಯ ಪಾಟೀಲ, ಎಸ್ಎಂ ಮರೆಗುದ್ದಿ ಮತ್ತು ರವೀಂದ್ರ ಗಡಾದ ಮಾರ್ಗದರ್ಶನ ನೀಡಿದರು ಎಂದಿದ್ದಾರೆ.