
ಬೆಂಗಳೂರು: ಜಮೀನು ಹಾಗೂ ಕಾರು ವಿಚಾರವಾಗಿ ಸಹೋದರರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರೂ ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿದೆ.
ಅಣ್ಣನೊಬ್ಬ ತಮ್ಮನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ತಮ್ಮ ಕಾರು ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಅಣ್ಣ ವೆಂಕಟೇಶ್, ತಮ್ಮ ಜಗದೀಶ್ ಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ.
ಅಣ್ಣ-ತಮ್ಮನ ನಡುವೆ ಜಮೀನು ಹಾಗೂ ಕಾರಿನ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಒಟ್ಟು ಕುಟುಂಬದಲ್ಲಿ ತಮ್ಮನ ಹೆಸರಲ್ಲಿ ಕಾರು ಖರೀದಿಯಾಗಿತ್ತು. ಕಾರು ಕೊಡುವಂತೆ ಅಣ್ಣ ವೆಂಕಟೇಶ್ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ತಮ್ಮ ನಿರಾಕರಿಸಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಅಣ್ಣ ವೆಂಕಟೇಶ್ ತಮ್ಮ ಜಗದೀಶ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಜಗದೀಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶ್ ಸಾವನ್ನಪ್ಪಿದ್ದಾರೆ.