ಬೆಂಗಳೂರು: ಜಗಳದ ವೇಳೆ ಚಾಕುವಿನಿಂದ ಇರಿದು ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ವರ್ ಲೇಔಟ್ ನಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಕ್ರಂ ಬೇಗ್(28) ಕೊಲೆಯಾದ ವ್ಯಕ್ತಿ. ಅವರನ್ನು ಕೊಲೆಗೈದ ಆರೋಪದ ಮೇಲೆ ಅಕ್ಬರ್ ಬೇಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತಾಯಿ ಅಮ್ರಿಜ್ ಬೇಗ್ ಅವರಿಗೆ ಮೂವರು ಮಕ್ಕಳಿದ್ದು, ಹಿರಿಯ ಮಗ ಅಕ್ಬರ್ ಮತ್ತು ಪುತ್ರಿ ಬೇರೆ ನೆಲೆಸಿದ್ದಾರೆ. ಅಕ್ರಂ ಬೇಗ್ ತಾಯಿಯೊಂದಿಗೆ ವಾಸವಾಗಿದ್ದ. ದಿನವೂ ಮದ್ಯ ಸೇವಿಸಿ ಬಂದು ತಾಯಿ ಜೊತೆಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಬುಧವಾರ ರಾತ್ರಿಯೂ ಇದೇ ರೀತಿ ತಾಯಿ ಜತೆ ಜಗಳವಾಡಿದ್ದು, ಈ ವೇಳೆ ಮನೆಗೆ ಬಂದಿದ್ದ ಹಿರಿಯ ಪುತ್ರ ಅಕ್ಬರ್ ತಮ್ಮನ ಜಗಳದಿಂದ ಬೇಸತ್ತು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅಕ್ರಂ ಬೇಗ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅಮ್ರಿಜ್ ಬೇಗ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.