ಉತ್ತರ ಪ್ರದೇಶದ ಆಗ್ರಾದಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಚಿನ್ನದ ಅಂಗಡಿಯನ್ನ ಟಾರ್ಗೆಟ್ ಮಾಡಿದ್ದ ಕಳ್ಳರು, ಬೆಳ್ಳಂಬೆಳಿಗ್ಗೆಯಿಂದಲೇ ಕಣ್ಣಿಟ್ಟಿದ್ದರು. ಅವಕಾಶ ಸಿಕ್ಕಿದ್ದೇ ತಡ ಕಳ್ಳರು ಗನ್ ಹಿಡಿದುಕೊಂಡು ಅಂಗಡಿಗೆ ನುಗ್ಗಿದ್ದಾರೆ. ಅಂಗಡಿಯಲ್ಲಿನ 6 ಚಿನ್ನದ ಸರ ಹಿಡಿದುಕೊಂಡು ಎಸ್ಕೇಪ್ ಆಗುವಷ್ಟರಲ್ಲಿ, ಅಲ್ಲಿದ್ದವರು ಅವರನ್ನ ಹಿಡಿಯಲು ನೋಡಿದ್ದಾರೆ. ತಕ್ಷಣವೇ ಆ ಪಾಪಿಗಳು ಕೈಯಲ್ಲಿದ್ದ ಗನ್ನಿಂದ ಅವರ ಮೇಲೆ ಫೈರಿಂಗ್ ಮಾಡಿದ್ದಾರೆ. ಈ ಘಟನೆಯಲ್ಲಿ ನಾಲ್ವರಿಗೆ ಗಂಭೀರ ರೂಪದ ಗಾಯಗಳಾಗಿವೆ. ಈ ಘಟನೆ ಅಲ್ಲೇ ಇದ್ದ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.
ಅದು ಲೋಹಮಂಡಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಜನನಿಬಿಡ ರಸ್ತೆ. ಅಲ್ಲಿ ಜನರ ಓಡಾಟ ಸದಾ ಇದ್ದೇ ಇರುತ್ತೆ. ಆದರೂ ಹೆಲ್ಮೆಟ್ ಧರಿಸಿಕೊಂಡು ಬೈಕ್ ಮೇಲೆ ಬಂದ ಮೂವರು ನಾರಾಯಣ್ ಅಗರ್ವಾಲ್ ಎಂಬುವರ ಚಿನ್ನಾಭರಣ ಮಳಿಗೆಗೆ ನುಗ್ಗಿ ಆರು ಚಿನ್ನದ ಸರವನ್ನ ದೋಚಿದ್ದಾರೆ. ಅಷ್ಟೆ ಅಲ್ಲ ಅಲ್ಲಿಂದ ಓಡಿ ಹೋಗುವ ಮುನ್ನ ನಾಲ್ವರಿಗೆ ಗುಂಡೇಟಿನಿಂದ ಗಾಯಗೊಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸ್ ಕಮಿಷನರ್ ಪ್ರೀತೀಂದರ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುವವರು ಪೊಲೀಸರಿಗೆ ಅಲ್ಲಿ ನಡೆದ ಘಟನೆಯ ವಿವರವನ್ನ ಹೇಳಿದ್ದಾರೆ. ಅಲ್ಲೇ ಇದ್ದ ಸೋನು ಅನ್ನುವ ವ್ಯಕ್ತಿ ದರೋಡೆಕೋರನನ್ನ ಹಿಡಿಯುವ ಧೈರ್ಯ ಮಾಡಿದ್ದಾನೆ. ಆದರೆ ಗುಂಡಿನ ದಾಳಿ ನಡೆಸಿದ್ದರಿಂದ ಅಲ್ಲಿದ್ದವರೆಲ್ಲರೂ ಜೀವ ಭಯಕ್ಕೆ ಸುಮ್ಮನಾಗಿದ್ದಾರೆ. ಆದರೂ ಈ ಕಳ್ಳರು 15-20 ಸುತ್ತುಗಳ ಗುಂಡಿನ ದಾಳಿ ನಡೆಸಿದ್ದರು. ಸದ್ಯಕ್ಕೆ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರು ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಪರಾಧಿಗಳು ಹೆಲ್ಮೆಟ್ ಧರಿಸಿಕೊಂಡು ಬಂದಿದ್ದರಿಂದ ಅವರನ್ನ ಪತ್ತೆ ಹಚ್ಚುವುದಕ್ಕೆ ಸ್ವಲ್ಪ ಸಮಸ್ಯೆಯಾಗಬಹುದು. ಆದರೆ ಈಗಾಗಲೇ ಸುತ್ತಮುತ್ತಲಿರುವ ಎಲ್ಲಾ ಅಂಗಡಿಗಳ ಸಿಸಿ ಟಿವಿ ದೃಶ್ಯವನ್ನ ಪರೀಕ್ಷೆ ಮಾಡಲಾಗುತ್ತಿದ್ದು, ದರೋಡೆಕೋರರು ಹೆಚ್ಚು ದಿನ ಸ್ವತಂತ್ರವಾಗಿ ಓಡಾಡಿಕೊಂಡು ಇರಲು ಸಾಧ್ಯವಿಲ್ಲ ಎಂದು, ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ.