ಮಂಗಳವಾರದಂದು ನಡೆದ ಡ್ರಾದಲ್ಲಿ 177 ಮಿಲಿಯನ್ ಪೌಂಡ್ಗಳ (ರೂ. 1804.161 ಕೋಟಿ) ಯುರೋಮಿಲಿಯನ್ಗಳ ಜಾಕ್ಪಾಟ್ ಅನ್ನು ಕ್ಲೈಮ್ ಮಾಡುವ ಮೂಲಕ ಬ್ರಿಟಿಷ್ ವ್ಯಕ್ತಿಯೊಬ್ಬರು ಸಾರ್ವಕಾಲಿಕ ಮೂರನೇ ಅತಿದೊಡ್ಡ ಲಾಟರಿ ಗೆದ್ದಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ಲಾಟರಿ ತಿಳಿಸಿದೆ.
ಮತ್ತೊಂದು ಮಹತ್ವದ ಸಂಗತಿಯೆಂದರೆ ವಿಜೇತ ವ್ಯಕ್ತಿ ಒಬ್ಬನೇ ಆಗಿದ್ದು, ಸಂಪೂರ್ಣ ಹಣವನ್ನು ಆತನೇ ಪಡೆಯುತ್ತಾನೆ. ಒಂದು ವೇಳೆ ಸಿಂಡಿಕೇಟ್ ಮೂಲಕ ಈ ಲಾಟರಿ ಖರೀದಿಸಿದ್ದರೆ ಹಣ ಹಂಚಿಕೆಯಾಗುತ್ತಿತ್ತು.
BBC ಯ ಪ್ರಕಾರ, ಬಹುಮಾನ ವಿಜೇತರು ಲಾಟರಿ ಹಣ ಪಡೆದ ತಕ್ಷಣವೇ ಬ್ರಿಟನ್ ನ ಖ್ಯಾತ ಸಂಗೀತಗಾರರಾದ ಹ್ಯಾರಿ ಸ್ಟೈಲ್ಸ್ ಮತ್ತು ಅಡೆಲೆಗಿಂತ ಶ್ರೀಮಂತರಾಗುತ್ತಾರೆ, ಈ ವರ್ಷದ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿ ಪ್ರಕಾರ ಅವರುಗಳು ಕ್ರಮವಾಗಿ 175 ಮಿಲಿಯನ್ ಪೌಂಡ್ ಮತ್ತು 170 ಮಿಲಿಯನ್ ಪೌಂಡ್ ಸಂಪತ್ತು ಹೊಂದಿದ್ದಾರೆ.
ವಿಜೇತರು ತಮ್ಮ ಟಿಕೆಟ್ ಅನ್ನು ಮೌಲ್ಯೀಕರಿಸಿದ ಮತ್ತು ಪಾವತಿಸಿದ ನಂತರ ತಮಗೆ ಇಷ್ಟೊಂದು ಮೊತ್ತ ಬಹುಮಾನವಾಗಿ ಬಂದ ವಿಷಯವನ್ನು ಸಾರ್ವಜನಿಕಗೊಳಿಸಬೇಕೇ ಅಥವಾ ಕಟ್ಟುನಿಟ್ಟಾದ ಅನಾಮಧೇಯತೆಯನ್ನು ವಿನಂತಿಸಬೇಕೇ ಎಂಬುದನ್ನು ನಿರ್ಧರಿಸಬಹುದಾಗಿದೆ.