
ಎತ್ತಿನ ಗಾಡಿ ಭಾರವಾಯ್ತು, ಗಾಡಿ ಮುಂದಕ್ಕೆ ಹೋಗ್ತಿಲ್ಲ ಎಂದು ಗಾಡಿಯಲ್ಲಿದ್ದ ಕೆಲವರನ್ನ ಕೆಳಗಿಳಿಸೋದನ್ನ ನೋಡಿದ್ದೀವಿ. ಆದರೆ ವಿಮಾನ ಭಾರವಾಯ್ತು ಅಂತ ವಿಮಾನದಲ್ಲಿದ್ದ ಕೆಲ ಪ್ರಯಾಣಿಕರನ್ನ ಕೆಳಗಿಳಿಸೋದನ್ನ ಕೇಳಿದ್ದೀರಾ ?
ಇಂತಹ ಘಟನೆಯೂ ನಡೆದಿದೆ. ಸ್ಪೇನ್ ನ ಲ್ಯಾಂಜರೋಟ್‌ನಿಂದ ಲಿವರ್‌ಪೂಲ್‌ಗೆ ಹಾರುತ್ತಿದ್ದ ಈಸಿಜೆಟ್ ವಿಮಾನದಲ್ಲಿ ಇದೇ ಕಾರಣಕ್ಕಾಗಿ 19 ಪ್ರಯಾಣಿಕರನ್ನು ಕೆಳಗಿಳಿಯುವಂತೆ ಕೇಳಲಾಗಿದೆ. ವಿಮಾನವು ಭಾರವಾಗಿದ್ದು ಟೇಕ್ ಆಫ್ ಮಾಡಲು ಸಾಧ್ಯವಾಗ್ತಿಲ್ಲ ಎಂದು ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ʼಇಂಡಿಪೆಂಡೆಂಟ್ʼ ವರದಿ ಮಾಡಿದೆ. ಜುಲೈ 5 ರ ಬುಧವಾರದಂದು ಈ ಘಟನೆ ನಡೆದಿದೆ.
ವಿಮಾನವು ರಾತ್ರಿ 9.45 ರ ಸುಮಾರಿಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನ ಮತ್ತು ವಿಮಾನದ ತೂಕದಿಂದಾಗಿ ವಿಳಂಬವಾಯಿತು. ವಿಮಾನ ಭಾರವಾಗಿದ್ದು ಟೇಕ್ ಆಫ್ ಆಗಲು ಸಾಧ್ಯವಾಗ್ತಿಲ್ಲ. ಹೀಗಾಗಿ ಪ್ರಯಾಣಿಕರಲ್ಲೇ ಕೆಲವರು ಸ್ವಯಂ ಆಗಿ ಕೆಳಗಿಳಿಯಬೇಕೆಂದು ವಿನಂತಿಸಲಾಗಿತ್ತು. ಅಂತಿಮವಾಗಿ ಸ್ವಯಂಪ್ರೇರಣೆಯಿಂದ 19 ಪ್ರಯಾಣಿಕರು ಕೆಳಗಿಳಿದ ನಂತರ ಅಂತಿಮವಾಗಿ 11:30 ಕ್ಕೆ ವಿಮಾನ ಟೇಕ್ ಆಫ್ ಆಯಿತು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪೈಲಟ್ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸುತ್ತಿರುವುದನ್ನು ಕಾಣಬಹುದು. ಅದೇ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿರುವ ವೀಡಿಯೊದಲ್ಲಿ ಪೈಲಟ್ ಪರಿಸ್ಥಿತಿಯನ್ನು ಅರ್ಥ ಮಾಡಿಸುತ್ತಿರುವುದನ್ನ ತೋರಿಸುತ್ತದೆ.