ಕೊರೊನಾ ನಿರೋಧಕ ಮಾತ್ರೆ ಮೊಲ್ನುಪಿರವಿರ್ಗೆ ಅನುಮೋದನೆ ನೀಡುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಮಾತ್ರೆ ಬಳಕೆಗೆ ಸಮ್ಮತಿ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ. ಅಮೆರಿಕ ಮೂಲದ ಮರ್ಕ್ ಹಾಗೂ ರಿಡ್ಜ್ಬ್ಯಾಕ್ ಬಯೋ ಥೆರಪಿಸ್ಟಿಕ್ಸ್ ಕಂಪನಿಗಳ ಸಹಭಾಗಿತ್ವದಲ್ಲಿ ಈ ಕೊರೊನಾ ನಿರೋಧಕ ಮಾತ್ರೆಗಳನ್ನು ತಯಾರಿಸಲಾಗಿದೆ.
ಬ್ರಿಟನ್ನ ಔಷಧಗಳು ಹಾಗೂ ಆರೋಗ್ಯ ಉತ್ಪನ್ನ ನಿಯಂತ್ರಣ ಸಂಸ್ಥೆಯು ಕೊರೊನಾ ನಿರೋಧಕ ಮಾತ್ರೆಗಳಿಗೆ ಹಸಿರು ನಿಶಾನೆ ತೋರಿದೆ. ಸೌಮ್ಯ ಹಾಗೂ ಮಧ್ಯಮ ಪ್ರಮಾಣದಲ್ಲಿ ಸೋಂಕನ್ನು ಹೊಂದಿರುವವರಿಗೆ ಈ ಮಾತ್ರೆಗಳನ್ನು ನೀಡಲು ಶಿಫಾರಸು ಮಾಡಲಾಗಿದೆ. ಕೊರೊನಾ ಸೋಂಕನ್ನು ಹೊಂದಿದ ಐದು ದಿನಗಳ ಒಳಗೆ ದಿನಕ್ಕೆ 2 ಮಾತ್ರೆಗಳನ್ನು ನೀಡಲಾಗುತ್ತದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್, ಇಡೀ ವಿಶ್ವದಲ್ಲಿಯೇ ಕೋವಿಡ್ ವಿರುದ್ಧದ ಹೋರಾಟಕ್ಕೆ ಮಾತ್ರೆಗಳ ಬಳಕೆಗೆ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ. ಈ ಮಾತ್ರೆಯು ಕೊರೊನಾ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.