ನವದೆಹಲಿ: ಹಿಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ., ತಂದೆ ಬಿರೇಂದರ್ ಸಿಂಗ್ ಅವರೊಂದಿಗೆ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.
ಬ್ರಿಜೇಂದ್ರ ಸಿಂಗ್ ಅವರು ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ‘ಬಲವಾದ ರಾಜಕೀಯ ಕಾರಣಗಳನ್ನು’ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಅವರು ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರ ಪುತ್ರ. ಇಂದು ತಮ್ಮ ತಂದೆ ಬಿರೇಂದರ್ ಸಿಂಗ್ ಅವರೊಂದಿಗೆ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದರು.
ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಸಂಸದನಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಪಕ್ಷ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಬಿರೇಂದರ್ ಸಿಂಗ್ ಅವರು 2014 ರಲ್ಲಿ ಕಾಂಗ್ರೆಸ್ ತೊರೆದಿದ್ದರು, ನಂತರ ಅವರನ್ನು ಬಿಜೆಪಿಯಿಂದ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಯಿತು ಮತ್ತು ಕೇಂದ್ರ ಸರ್ಕಾರದಲ್ಲಿ ಉಕ್ಕು ಸಚಿವರನ್ನಾಗಿ ನೇಮಿಸಲಾಯಿತು. ಅವರ ಪತ್ನಿ ಪ್ರೇಮಲತಾ ಅವರನ್ನು ಉಚ್ಚಾಣ ಕ್ಷೇತ್ರದಿಂದ ಶಾಸಕಿಯನ್ನಾಗಿ ಮಾಡಲಾಯಿತು. 2019 ರಲ್ಲಿ, ಬ್ರಿಜೇಂದ್ರ ಸಿಂಗ್ ಹಿಸಾರ್ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. ಈಗ ಹತ್ತು ವರ್ಷಗಳ ನಂತರ ಸಿಂಗ್ ಕುಟುಂಬ ಕಾಂಗ್ರೆಸ್‌ಗೆ ಮರಳುತ್ತಿದೆ.