ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬ್ರಿಡ್ಜ್ ಉದ್ಘಾಟನೆಯ ದಿನದಂದು ರಿಬ್ಬನ್ ಕತ್ತರಿಸಲು ಅಧಿಕಾರಿಗಳು ಜಮಾಯಿಸುತ್ತಿದ್ದಂತೆ ಸೇತುವೆ ಕುಸಿದಿದೆ.
ನಾಗರಿಕರಿಗೆ ನದಿ ದಾಟಲು ಸಹಾಯ ಮಾಡಲು ಸಣ್ಣ ಸೇತುವೆಯನ್ನು ನಿರ್ಮಿಲಾಗಿತ್ತು. ಈ ಮೊದಲು, ಆ ಸ್ಥಳದಲ್ಲಿ ತಾತ್ಕಾಲಿಕ ಸೇತುವೆ ಇತ್ತು. ಅದು ಕೆಲವೊಮ್ಮೆ ಕುಸಿಯುತ್ತಿತ್ತು. ಹೀಗಾಗಿ ನಾಗರಿಕರ ಸುರಕ್ಷತೆಗಾಗಿ ಹೊಸ ಸೇತುವೆಯನ್ನು ರಚಿಸಲಾಗಿತ್ತು. ಆದರೆ, ಅದು ವ್ಯರ್ಥವಾಯಿತು.
ಸೇತುವೆ ಕುಸಿತದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಅನೇಕ ನೆಟ್ಟಿಗರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕಳಪೆ ನಿರ್ಮಾಣ ಗುಣಮಟ್ಟವನ್ನು ಲೇವಡಿ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುತ್ತು ಹೊಡೆಯುತ್ತಿರುವ ವಿಡಿಯೋ ಕ್ಲಿಪ್ನಲ್ಲಿ ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಸೇತುವೆಯನ್ನು ಉದ್ಘಾಟಿಸಲು ಸರ್ಕಾರದ ಪ್ರತಿನಿಧಿಗಳು ಒಟ್ಟಿಗೆ ನಿಂತಿದ್ದರು.
ಕೆಂಪು ರಿಬ್ಬನ್ ಅನ್ನು ಕತ್ತರಿಸುತ್ತಿದ್ದಂತೆ ಸೇತುವೆ ಮುರಿದುಬಿತ್ತು. ಸೇತುವೆ ಕುಸಿಯಲು ಪ್ರಾರಂಭಿಸಿದ ತಕ್ಷಣ ಮಹಿಳಾ ಅಧಿಕಾರಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇತರ ಪುರುಷ ಪ್ರತಿನಿಧಿಗಳು ಸೇತುವೆಗೆ ನೇತಾಡುತ್ತಲೇ ಇದ್ದರು.
ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವ ಮೊದಲು ರಕ್ಷಣಾ ತಂಡವು ಅಲ್ಲಿದ್ದವರನ್ನು ರಕ್ಷಣೆ ಮಾಡಿದೆ.