ಹದಗೆಟ್ಟ ರಸ್ತೆಗಳ ಕುರಿತ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗುತ್ತಿದ್ದು, ಇದರ ಮಧ್ಯೆ ಕೇರಳದ ವಧು ಒಬ್ಬರು ತಮ್ಮ ಮದುವೆ ಫೋಟೋಶೂಟ್ ಅನ್ನು ರಸ್ತೆ ಗುಂಡಿಗಳ ನಡುವೆ ಮಾಡಿಸಿಕೊಂಡು ವಿಭಿನ್ನವಾಗಿ ಸ್ಥಳೀಯಾಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.
ಸಾಮಾನ್ಯವಾಗಿ ವರ – ವಧು ಪ್ರಕೃತಿಯ ಸುಂದರ ತಾಣಗಳಲ್ಲಿ ತಮ್ಮ ಫೋಟೋ ಶೂಟ್ ಮಾಡಿಸಿಕೊಂಡರೆ ಈ ವಧು ಮಾತ್ರ ರಸ್ತೆ ಎಂದು ನೆಪ ಮಾತ್ರಕ್ಕೆ ಹೇಳಬಹುದಾದ ಸ್ಥಳದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೆಂಪು ಸೀರೆಯುಟ್ಟ ವಧು ಗುಂಡಿ ಗೊಟರುಗಳಿಂದ ಕೂಡಿದ ರಸ್ತೆಯಲ್ಲಿ ನಡೆದು ಬರುತ್ತಿದ್ದರೆ ವಿಡಿಯೋ ಗ್ರಾಫರ್ ವಧುವಿನ ಜೊತೆಗೆ ಹದಗೆಟ್ಟ ರಸ್ತೆಯನ್ನೂ ಫೋಕಸ್ ಮಾಡಿದ್ದಾರೆ.
ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಧುವಿನ ಸೃಜನಶೀಲತೆ ಕುರಿತು ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿರುವ ಹಲವರು ಇದನ್ನು ರಸ್ತೆ ಎಂದು ಯಾರಾದರೂ ಕರೆಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಈ ಫೋಟೋಶೂಟ್ ರಸ್ತೆಯಲ್ಲಿ ಅಲ್ಲ ಬದಲಾಗಿ ಕೊಳದ ಬಳಿ ನಡೆದಿರಬಹುದು ಎಂದು ಹೇಳಿದ್ದಾರೆ.