ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪುರಭವನದಲ್ಲಿ ಗುರುವಾರ ನಿಗದಿಯಾಗಿದ್ದ ಮದುವೆ ವರ ಬಾರದ ಹಿನ್ನೆಲೆಯಲ್ಲಿ ರದ್ದಾಗಿದೆ.
ವರನ ಮೊದಲ ಪತ್ನಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದೇ ಘಟನೆಗೆ ಕಾರಣವೆನ್ನಲಾಗಿದೆ. ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ರೆಂಜದ ಯುವಕನೊಂದಿಗೆ ಗುರುವಾರ ಮದುವೆ ನಿಗದಿಯಾಗಿತ್ತು.
ಕೆವಿಜಿ ಪುರಭವನದಲ್ಲಿ ಮದುವೆ ನಡೆಯಬೇಕಿದ್ದ ಕಾರಣ ಮದುಮಗನ ಕಡೆಯಿಂದ ಜನ ಬಂದಿದ್ದರು, ಮಂಟಪವನ್ನು ಅಲಂಕರಿಸಲಾಗಿತ್ತು. ವಧುವಿನ ಕಡೆಯವರು ಕೂಡ ಮದುವೆಗೆ ಸಿದ್ಧತೆ ನಡೆಸಿದ್ದು, 500 ಮಂದಿಗೆ ಭೋಜನದ ವ್ಯವಸ್ಥೆ ಮಾಡಿದ್ದರು. ಆದರೆ, ಇದ್ದಕ್ಕಿದ್ದಂತೆ ವರ ನಾಪತ್ತೆಯಾಗಿದ್ದು, ಫೋನ್ ಸ್ವಿಚ್ ಆಫ್ ಆಗಿದೆ.
ವಧುವಿನ ಕಡೆಯವರು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವರನಿಗೆ ಈ ಹಿಂದೆ ಮದುವೆಯಾಗಿದ್ದು, ಆತನ ಮೊದಲ ಪತ್ನಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿರುವುದು ಗೊತ್ತಾಗಿದೆ. ಇದರಿಂದಾಗಿ ವರ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಮದುವೆ ರದ್ದುಪಡಿಸಿ ವಧುವಿನ ಕಡೆಯವರು ಸಭಾಂಗಣದಿಂದ ಹೊರಟು ಹೋಗಿದ್ದಾರೆ. ಸಿದ್ಧಪಡಿಸಲಾಗಿದ್ದ ಊಟವನ್ನು ಅಧಿಕಾರಿಗಳ ಮೂಲಕ ವಸತಿ ನಿಲಯಗಳಿಗೆ ತಲುಪಿಸಲಾಗಿದೆ.