ಮಂಗಳೂರು: ಮದುವೆ ಮಂಟಪದಲ್ಲಿ ತಾಳಿ ಕಟ್ಟಿಸಿಕೊಳ್ಳುವ ಸಂದರ್ಭದಲ್ಲಿ ವಧು ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮಂಟಪದಲ್ಲಿ ಮದುವೆ ಮುರಿದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ನೆಲ್ಯಾಡಿ, ಕೊಣಾಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಉಮೇಶ ಅವರ ಮದುವೆ ಬಂಟ್ವಾಳ ತಾಲೂಕಿನ ಯುವತಿಯೊಂದಿಗೆ ನಿಗದಿಯಾಗಿತ್ತು. ಕಾಂಚನ ಪೆರ್ಲ ಷಣ್ಮುಖ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ಮದುವೆ ನಡೆಸಿ ನಂತರ ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ಏರ್ಪಡಿಸಲಾಗಿತ್ತು. ವಧು ಮತ್ತು ವರನ ಮನೆಯವರು ಸಂಬಂಧಿಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು.
ಶುಕ್ರವಾರ ಮದುವೆ ಮಂಟಪದಲ್ಲಿ ವಧು-ವರ ಪರಸ್ಪರ ಹಾರ ಹಾಕಿಕೊಂಡಿದ್ದಾರೆ. ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ಮದುವೆ ಇಷ್ಟವಿಲ್ಲ ಎಂದು ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ್ದಾರೆ. ಉಮೇಶನಿಗೆ ತಾಳಿ ಕಟ್ಟಲು ವಧು ಅವಕಾಶ ಕೊಟ್ಟಿಲ್ಲ. ಆಗ ಎರಡೂ ಕಡೆಯವರು ವಧುವಿನ ಮನವೊಲಿಸಲು ಮುಂದಾದರೂ ಆಕೆ ತಾಳಿ ಕಟ್ಟಿಸಿಕೊಳ್ಳಲು ಒಪ್ಪಿಕೊಂಡಿಲ್ಲ.
ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾತುಕತೆಯ ನಂತರ ಆಗಿರುವ ಆಚಾತುರ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ ವಧು ಉಮೇಶ್ ಅವರನ್ನು ಮದುವೆಯಾಗಲು ಒಪ್ಪಿದ್ದಾರೆ. ಆದರೆ, ಇದಕ್ಕೆ ಉಮೇಶ ಒಪ್ಪಲಿಲ್ಲ. ಕೊನೆಗೆ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟು ತಮ್ಮ ಊರುಗಳಿಗೆ ತೆರಳಿದ್ದಾರೆ.