ಬಿಹಾರದ ವೈಶಾಲಿ ಜಿಲ್ಲೆಯ ಸರಸೈ ಗ್ರಾಮದಲ್ಲಿ ವಿಶಿಷ್ಟವಾದ ಘಟನೆಯೊಂದು ನಡೆದಿದೆ. ಮದುವೆಯಾದ ಬಳಿಕ ವಧುವೊಬ್ಬರು ಹೆಲಿಕಾಪ್ಟರ್‌ನಲ್ಲಿ ತನ್ನ ಗಂಡನ ಮನೆಗೆ ಪ್ರಯಾಣ ಬೆಳೆಸಿದ್ದಾರೆ. ಈ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಮುಗಿಬಿದ್ದಿದ್ದರು.
ಸರಸೈ ಗ್ರಾಮದ ಕೃಷ್ಣ ಶರ್ಮಾ ಅವರ ಪುತ್ರಿಯ ವಿವಾಹವು ಇತ್ತೀಚೆಗೆ ನೆರವೇರಿತ್ತು. ಮದುವೆಯಾದ ನಂತರ, ಅವರ ಪುತ್ರಿ ಮತ್ತು ಅಳಿಯ ಹೆಲಿಕಾಪ್ಟರ್‌ನಲ್ಲಿ ಅವರ ಮನೆಗೆ ಆಗಮಿಸಿದರು. ಈ ವಿಷಯವು ಗ್ರಾಮದಲ್ಲಿ ಚರ್ಚೆಯ ವಿಷಯವಾಯಿತು.
ಕೃಷ್ಣ ಶರ್ಮಾ ಅವರ ಅಳಿಯ ಧೀರಜ್ ರಾಯ್ ಮಧ್ಯಪ್ರದೇಶದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಧೀರಜ್ ರಾಯ್ ತಮ್ಮ ಪತ್ನಿಯೊಂದಿಗೆ ಉತ್ತರ ಪ್ರದೇಶದ ಬಲ್ಲಿಯಾ ಗ್ರಾಮದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು.
ಗ್ರಾಮಸ್ಥರು ತಮ್ಮೂರಿನ ಹೆಣ್ಣುಮಗಳು ಹೆಲಿಕಾಪ್ಟರ್‌ನಲ್ಲಿ ಬರುತ್ತಿರುವುದನ್ನು ನೋಡಲು ಕಾತುರರಾಗಿದ್ದರು. ಹೆಲಿಕಾಪ್ಟರ್ ಸರಸೈ ಗ್ರಾಮಕ್ಕೆ ತಲುಪುತ್ತಿದ್ದಂತೆ, ಜನರು ಸುಪ್ರಿಯಾ ರಾಣಿ ಮತ್ತು ಧೀರಜ್ ರಾಯ್ ಅವರನ್ನು ಹೂವಿನ ಹಾರಗಳಿಂದ ಸ್ವಾಗತಿಸಿದರು. ಅವರನ್ನು ಕಾರಿನಲ್ಲಿ ಮನೆಗೆ ಕರೆದೊಯ್ದು ಅಲ್ಲಿ ನವದಂಪತಿಗಳಿಗೆ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಸುಮಾರು 1 ಗಂಟೆಯವರೆಗೆ ಹೆಲಿಕಾಪ್ಟರ್ ಹೆಲಿಪ್ಯಾಡ್‌ನಲ್ಲಿ ನಿಂತಿದ್ದು, ನಂತರ ಕೃಷ್ಣ ಶರ್ಮಾ ತಮ್ಮ ಇಡೀ ಕುಟುಂಬದೊಂದಿಗೆ ಹೆಲಿಕಾಪ್ಟರ್‌ನಲ್ಲಿ ವಿಹಾರಕ್ಕೆ ತೆರಳಿದರು. ಗ್ರಾಮದಲ್ಲಿ ಹೆಲಿಕಾಪ್ಟರ್ ಬಂದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.