ಅದ್ದೂರಿ ಮದುವೆಗಳಲ್ಲಿ ಊಟದಿಂದ ಹಿಡಿದು ನೂರಾರು ಅತಿಥಿಗಳಿಗೆ ಆತಿಥ್ಯ ಮಾಡುವವರೆಗೂ ಎಲ್ಲವೂ ಐಷಾರಾಮಿಯಾಗಿ ಆಗುವುದು ಸಹಜ. ಅದರಲ್ಲೂ ಅತಿಥಿಗಳಿಗೆ ಸಂತೃಪ್ತಿ ಆಗುವ ಮಟ್ಟದಲ್ಲಿ ಭೋಜನ ಕೂಟದ ವ್ಯವಸ್ಥೆ ಮಾಡುವುದು ಬಹಳ ದೊಡ್ಡ ಹೊಣೆಯಾಗಿರುತ್ತದೆ.
ಕೆಲವೊಮ್ಮೆ ಅದೆಷ್ಟೇ ಪ್ರಯತ್ನ ಮಾಡಿ ಎಲ್ಲವನ್ನೂ ಸಾಂಗವಾಗಿ ನಡೆಸಿಕೊಡಲು ನೋಡಿದರೂ ಕೆಲವೊಂದು ಕಿರಿಕಿರಿ ಅತಿಥಿಗಳಿಂದ ದೂರುಗಳನ್ನು ಕೇಳಲೇಬೇಕಾಗುತ್ತದೆ. ಇದೀಗ, ಮದುವೆಯ ಭೋಜನ ಕೂಟಕ್ಕೆ ಸಾಕಷ್ಟು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿಲ್ಲವೆಂದು ಹುಡುಗಿಯ ಮನೆಯವರು ಹುಡುಗನ ಮನೆಯವರ ಮೇಲೆ ದೂರುತ್ತಿರುವ ಕಥೆಯೊಂದನ್ನು ರೆಡ್ಡಿಟ್ನಲ್ಲಿ ಶೇರ್ ಮಾಡಲಾಗಿದೆ.
ಮದುಮಗಳು ತನ್ನ ನಾದಿನಿಯನ್ನು ಮೇಡ್ ಆಫ್ ಹಾನರ್ ಆಗಿ ಆಯ್ಕೆ ಮಾಡಿಕೊಂಡು, ಮೂರು ದಿನಗಳ ಮಟ್ಟಿಗೆ ತನ್ನ ಬ್ಯಾಚುಲರ್ ಪಾರ್ಟಿಗೆ ಆಕೆ ಖರ್ಚು ಮಾಡಲೆಂದು ನಿರೀಕ್ಷಿಸಿದ್ದಾಳೆ. ಆದರೆ ನಾದಿನಿಯ ಕೈಯಲ್ಲಿ ಪಾರ್ಟಿಗೆ ದುಡ್ಡು ಹೊಂದಿಸಲು ಸಾಧ್ಯವಾಗದೇ ಇದ್ದ ಕಾರಣ ಹುಡುಗನ ತಾಯಿ ಇದಕ್ಕೆ ಪಾವತಿ ಮಾಡಬೇಕಾಗಿ ಬಂದಿತ್ತು.
ದುಡ್ಡು ಪಾವತಿ ಮಾಡಿದರೂ ಸಹ ತನ್ನನ್ನು ಈ ಪಾರ್ಟಿಗೆ ಕರೆಯದವರು ಹುಡುಗಿಯ ತಾಯಿಯನ್ನು ಕರೆದಿದ್ದಾರೆ ಎಂದು ಹುಡುಗನ ತಾಯಿ ದೂರಿದ್ದಾರೆ. ಹುಡುಗನ ತಾಯಿ ಚರ್ಚ್ನ ಜಾಗ, ಊಟಕ್ಕೆ ತರಲಾಗಿದ್ದ ಐಟಮ್ಗಳಿಗೆಂದು $10,000ಗಳನ್ನು ಪಾವತಿ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಒಂದೇ ಒಂದು ’ಥ್ಯಾಂಕ್ ಯೂ’ ಎಂದು ಹುಡುಗಿ ಮನೆಯವರ ಬಾಯಲ್ಲಿ ಬರಲಿಲ್ಲ ಎಂದು ಹುಡುಗನ ತಾಯಿಗೆ ಬೇಸರವಾಗಿದೆ.
ಇದೆಲ್ಲಾ ಆದ ಬಳಿಕ 200 ಮಂದಿಗೆ ಊಟದ ಭಾಗವಾಗಿ 200 ಪೀಸ್ ಚಿಕನ್ಗಳನ್ನು ಮಾತ್ರ ಆರ್ಡರ್ ಮಾಡಲಾಗಿದೆ ಎಂದು ಅರಿತ ಹುಡುಗನ ತಾಯಿ, ಕೆಟರರ್ನನ್ನು ಕರೆದು, ’ಸರಿಯಾದ ವೇಳೆಗೆ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಿ ಬಡಿಸಿ’ ಎಂದಿದ್ದಾರೆ.
ಊಟಕ್ಕೆ ಹೀಗೆ ತುಂಡು-ಮೋಟಾಗಿ ವ್ಯವಸ್ಥೆ ಮಾಡಿದ್ದ ಕಥೆ ವೈರಲ್ ಆಗಿದ್ದು, ಇದೆಂಥಾ ’ಚೀಪ್ ಅಫೇರ್’ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರಲ್ಲಿ ಹುಡುಗನ ತಾಯಿ ಹಾಗೂ ಹುಡುಗಿಯ ಕುಟುಂಬದ ಪರವಾಗಿ ಪರ-ವಿರೋಧದ ಮಾತುಗಳು ಕಾಮೆಂಟ್ ರೂಪದಲ್ಲಿ ಹರಿದುಬಂದಿವೆ.