ಮದುವೆ ಮೆರವಣಿಗೆ ವೇಳೆ ಮದುಮಗನ ಅನುಚಿತ ವರ್ತನೆಯಿಂದಾಗಿ ವಿವಾಹವನ್ನೇ ರದ್ದು ಮಾಡಿಕೊಳ್ಳಲು ಮದುಮಗಳು ನಿರ್ಧರಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಜರುಗಿದೆ.
ಶಹಜ಼ಾದ್ ಹೆಸರಿನ ಮದುಮಗನ ಮೆರವಣಿಗೆ ಸಂದರ್ಭದಲ್ಲಿ ಆತನ ಚಿಕ್ಕಪ್ಪಂದಿರುವ ಬಂದೂಕಿನಲ್ಲಿ ಫೈರಿಂಗ್ ಮಾಡಿ, ಹುಡುಗಿಯ ಚಿಕ್ಕಪ್ಪನಿಗೆ ಗಾಯಗೊಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ 22 ವರ್ಷದ ಮದುಮಗಳು ಇರಾಮ್ ಮದುವೆಯೇ ಬೇಡವೆಂದಿದ್ದಾರೆ.
“ನನ್ನ ಇಡೀ ಕುಟುಂಬದ ಮುಂದೆಯೇ ಆತನ ಕುಟುಂಬ ಹೀಗೆ ವರ್ತಿಸುತ್ತಿದೆ ಎಂದರೆ ನಾನು ಅವರೊಂದಿಗೆ ಅವರ ಜಾಗದಲ್ಲಿ ಒಬ್ಬಳೇ ಇದ್ದಾಗ ಅವರು ಇನ್ಯಾವ ಮಟ್ಟದಲ್ಲಿ ವರ್ತಿಸಬಹುದು?” ಎಂದು ಇರಾಮ್ ಹೇಳಿದ್ದಾರೆ.
ಸಂಭ್ರಮಾಚರಣೆಯಲ್ಲಿ ಮಿಂದೆದ್ದ ಚಿನ್ನದ ಹುಡುಗನ ಊರು
ಗಂಡಿನ ಕಡೆಯವರ ಕಿರಿಕಿರಿಯಿಂದ ಸಿಟ್ಟಿಗೆದ್ದ ಹೆಣ್ಣಿನ ಮನೆಯವರು ಗಂಡಿನ ಕಾರನ್ನು ಪುಡಿಪುಡಿ ಮಾಡಿ ಆತನ ಸಂಬಂಧಿಕರಿಗೆ ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಸಮಾರಂಭದ ವಿಡಿಯೋ ಫುಟೇಜ್ ನೋಡಿ, ಫೈರಿಂಗ್ ಯಾರು ಮಾಡಿದರು ಎಂದು ಅರಿತು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಡು ಶಹಜ಼ಾದ್, ಆತನ ಸಹೋದರ ಪಪ್ಪು ಹಾಗೂ ಸನ್ನು ಎಂಬ ವ್ಯಕ್ತಿಗಳ ವಿರುದ್ಧ ಐಪಿಸಿಯ 307ನೇ ವಿಧಿ ( ಕೊಲೆಗೆ ಯತ್ನ) ಪ್ರಕರಣ ದಾಖಲಿಸಲಾಗಿದೆ. ಲೈಸೆನ್ಸ್ ಇದ್ದ ಶಸ್ತ್ರದಿಂದ ಬುಲಟ್ ಫೈರ್ ಮಾಡಲಾಗಿದ್ದು, ಲೈಸೆನ್ಸ್ ರದ್ದುಪಡಿಸಲು ಕೋರಿ ವರದಿ ಕಳುಹಿಸಲಾಗುವುದು ಎಂದು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ರವೀಂದ್ರ ಪಲಾವತ್ ತಿಳಿಸಿದ್ದಾರೆ.