ಮದುವೆ ಅಂದ ಮೇಲೆ ಅಲ್ಲಿ ಗಂಡಿನ ಮನೆ, ಹೆಣ್ಣಿನ ಮನೆ ಅಂತ ಒಂದು ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಲೇ ಇರುತ್ತೆ. ಗಂಡಿನ ಕಡೆಯವರು ನಮಗೆ ವರೋಪಚಾರ ಚೆನ್ನಾಗಿ ಮಾಡ್ಬೇಕು ಅಂತ ಹೇಳ್ತಾ ಇದ್ದರೆ, ಹೆಣ್ಣಿನ ಮನೆಯವರು ನಾವೇನು ಕಡಿಮೆನಾ ಅಂತ ಪೈಪೋಟಿ ಕೊಡ್ತಾ ಇರ್ತಾರೆ.
ಇದೆಲ್ಲ ಮಾತು-ನಗುವಿನಲ್ಲಿ ಶುರುವಾಗಿ ಅಲ್ಲೇ ಅಂತ್ಯವಾಗಿ ಬಿಡುತ್ತೆ. ಆದರೆ ಇಲ್ಲಿ ನೋಡಿ ಮದುವೆ ಗಂಡು ಮತ್ತು ಮದುವೆ ಹೆಣ್ಣಿನ ಕುಸ್ತಿಯಾಟ. ಮಂಟಪದಲ್ಲೇ ಎಲ್ಲರ ಎದುರೇ ಶುರುವಾಗಿತ್ತು ಕಿತ್ತಾಟ.
ಈ ವಧು-ವರರನ್ನು, ನೋಡಿದಾಕ್ಷಣ ಇವರಿಗೆ ಮದುವೆ ಮಾಡಲಾಗುತ್ತಿದೆಯೋ ಅಥವಾ ಕುಸ್ತಿ ಅಖಾಡಕ್ಕೆ ಇಳಿಸಲಾಗುತ್ತಿದೆಯೋ ಎಂಬ ಭಾವನೆ ಬರುವುದು ಸಹಜ. ಯಾಕಂದರೆ ಒಂದು ಕಡೆ ಶಾಸ್ತ್ರ ನಡೆಯುತ್ತಿದೆ. ಇನ್ನೇನು ಸಪ್ತಪದಿಗೆ ವಧು ವರ ಎದ್ದು ನಿಲ್ಲಬೇಕು ಅಷ್ಟೇ. ವರ ಅದ್ಯಾಕೋ ತಮಾಷೆ ಮಾಡುವ ಮೂಡಿಗೆ ಬಂದಿದ್ದಾನೆ. ಹಾಗೆ ಸುಮ್ಮನೆ, ವಧುವಿನ ಕೆನ್ನೆ ಮುಟ್ಟುತ್ತಾನೆ. ವಧುವಿಗೆ ರಂಪ ಮಾಡಲು ಇಷ್ಟೇ ಸಾಕಾಯಿತು. ವರನಿಗೆ ಬಾರಿಸಿಯೇ ಬಿಡುತ್ತಾಳೆ.
ಇಷ್ಟು ಜನರ ಮುಂದೆ ವಧು ಹೀಗೆ ಬಾರಿಸಿದರೆ ವರ ಬಿಡ್ತಾನಾ? ತಾನೂ ವಾಪಸ್ ಹೊಡೆಯುತ್ತಾನೆ. ಒಟ್ಟಿನಲ್ಲಿ ಸಪ್ತಪದಿ ತುಳಿಯಬೇಕಾಗಿದ್ದ ಜೋಡಿ, ಮಂಟಪದಲ್ಲಿ ಕುಸ್ತಿ ಆಡಿಬಿಟ್ಟರು. ಈ ಪಂದ್ಯದಲ್ಲಿ ಮಂತ್ರ ಹೇಳ್ತಿದ್ದ ಭಟ್ಟರೇ ರೆಫರಿಯಾದಂತಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಈ ನೇಪಾಳಿ ವಧು-ವರರ ವಿಡಿಯೋ ವೈರಲ್ ಆಗಿದೆ. ಜನರು, ಈ ವಿಡಿಯೋ ನೋಡಿ ಎಂಜಾಯ್ ಮಾಡ್ತಿದ್ದಾರೆ. ಅಷ್ಟಕ್ಕೂ ಇಲ್ಲಿ ಹೀಗೆ ಕುಸ್ತಿ ನಡೆದಿದ್ದು ಕೇವಲ ತಮಾಷೆಗಾಗಿ ಅಷ್ಟೆ.