ಅಂಗಡಿ ಹೆಸರು ಬದಲಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಲಂಚ ಪಡೆದಿದ್ದ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿಯೊಬ್ಬರಿಗೆ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಮತ್ತು 40,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿವರ: ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ (ಎನ್ ಆರ್ ಪುರ) ನಿವಾಸಿ ಜೋಸೆಫ್ ಎಂಬುವರು ತಮ್ಮ ಹರ್ಷಲ್ ಟೆಕ್ಸ್ ಟೈಲ್ಸ್ ಬಟ್ಟೆ ಅಂಗಡಿಯ ಹೆಸರನ್ನು ಮರಿಯಾ ಫ್ಯಾಷನ್ಸ್ ಎಂದು ಬದಲಾಯಿಸಿಕೊಳ್ಳಲು ಬಯಸಿದ್ದು, ಇದಕ್ಕಾಗಿ ತಮ್ಮ ನೌಕರ ಪಾಂಡು ಎಂಬವರ ಮೂಲಕ ತರೀಕೆರೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿದ್ದ ಟಿ. ಪಾಲಾಕ್ಷಪ್ಪ ಅವರ ಬಳಿ ಅರ್ಜಿ ಸಲ್ಲಿಸಲು ಕಳುಹಿಸಿದ್ದರು.
ಈ ವೇಳೆ ಪಾಲಾಕ್ಷಪ್ಪ 5000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪದ ಪಾಂಡು ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಲೋಕಾಯುಕ್ತ ಇನ್ಸ್ಪೆಕ್ಟರ್ ಗುರುರಾಜ್ ನೇತೃತ್ವದ ತಂಡ ಪಾಲಾಕ್ಷಪ್ಪ ಅವರು ಲಂಚ ಪಡೆಯುವ ವೇಳೆ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಬಂಧಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶುಭಗೌಡರ್ ಆಗಸ್ಟ್ 1ರಂದು ತೀರ್ಪು ನೀಡಿದ್ದು, ಪಾಲಾಕ್ಷಪ್ಪ ಅವರಿಗೆ ಮೂರು ವರ್ಷ ಸಜೆ ಮತ್ತು 40,000 ರೂಪಾಯಿ ದಂಡ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ವಿ.ಟಿ. ಥಾಮಸ್ ವಾದ ಮಂಡಿಸಿದ್ದರು.