ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಕೇಸ್ ವರ್ಕರ್ ನಿಂದ ಹಿಡಿದು ಆಯುಕ್ತರವರೆಗೂ ಲಂಚ ಸ್ವೀಕಾರ ಮಾಡಲಾಗುತ್ತಿತ್ತು. ಒಂದೇ ಪ್ರಕರಣದಲ್ಲಿ ಆರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಈರೇಶ್ ಎಂಬುವವರ 20 ಎಕರೆ ಜಮೀನಿಗೆ ಬುಡಾ ಅಪ್ರೂವಲ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಯುಕ್ತ ರಮೇಶ ವಟಗಲ್ 5 ಲಕ್ಷ ರೂ. ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಇನ್ನೂ ಆರು ಲಕ್ಷ ರೂಪಾಯಿಗೆ ಬುಡಾ ಟೌನ್ ಪ್ಲಾನಿಂಗ್ ಮೆಂಬರ್ ಕಲ್ಲಿನಾಥ ಬೇಡಿಕೆ ಇಟ್ಟಿದ್ದು, ಅವರನ್ನು ಕೂಡ ಬಂಧಿಸಲಾಗಿದೆ.
ಮೂರು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಸಿಸ್ಟೆಂಟ್ ಟೌನ್ ಪ್ಲಾನರ್, ಫೋನ್ ಪೇ ಮೂಲಕ 10 ಸಾವಿರ ಲಂಚ ಸ್ವೀಕರಿಸಿದ್ದ ಮ್ಯಾನೇಜರ್ ನಾರಾಯಣ, 20 ಸಾವಿರ ರೂಪಾಯಿ ಲಂಚ ಪಡೆದಿದ್ದ ಕೇಸ್ ವರ್ಕರ್ ಶಂಕರನನ್ನು ಕೂಡ ಬಂಧಿಸಲಾಗಿದೆ. ಫೋನ್ ಪೇ ಮೂಲಕ 20,000 ರೂ. ಲಂಚ ಪಡೆದಿದ್ದ ಜೂನಿಯರ್ ಇಂಜಿನಿಯರ್ ಖಾಜಾ ಹುಸೇನ್ ಅವರನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.